ಮಂಗಳೂರು: ಮುಕ್ತ ಹಾಗೂ ದೂರ ಶಿಕ್ಷಣವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಸೀಮಿತಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಮಂಗಳೂರು ವಿವಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಣಯಿಸಿದೆ.
ಇತ್ತೇಚೆಗೆ ಜರುಗಿದ ವಿವಿ ಸಿಂಡಿಕೇಟ್ ಸಭೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದ ವಿರುದ್ಧ ನಾವು ಹೋಗುತ್ತಿಲ್ಲ. ಇದರಿಂದ ಮುಖ್ಯವಾಗಿ ಮಂಗಳೂರು, ಉಡುಪಿ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಸರ್ಕಾರದ ತೀರ್ಮಾನ ಜಾರಿಯಾದರೆ ಆರ್ಥಿಕವಾಗಿ ಮಂಗಳೂರು ವಿವಿಗೆ ಕೂಡ ವಾರ್ಷಿಕ ಸುಮಾರು 5.5 ಕೋಟಿ ರೂ. ನಷ್ಟ ಉಂಟಾಗಲಿದೆ. ಮಂಗಳೂರು ವಿವಿಯ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳಿಗೆ ಕೂಡ ಅನ್ಯಾಯ ಆಗುತ್ತದೆ ಎಂದು ವಿವಿಯ ಹಿರಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಕಾರ ಕೂಡ ನಮಗೆ ಪ್ರಸ್ತಾವಿತ ಶಿಕ್ಷಣ ಪದ್ಧತಿಯನ್ನು ಮುಂದುವರಿಸಲು ಅವಕಾಶವಿದೆ. ನಮಗೆ ಅನ್ಯಾಯ ಆಗುತ್ತದೆ ಎನ್ನುವುದನ್ನು ಹೇಳಲು ಸಾಕಷ್ಟು ಕಾರಣ, ಸಮರ್ಥನೆಗಳಿವೆ. ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಕುವೆಂಪು ವಿವಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣವನ್ನು ನ್ಯಾಯಾಲಯ ಸ್ವೀಕರಿಸಿದೆ. ಇದೇ ಹಾದಿಯಲ್ಲಿ ಸಾಗಲು ಮಂಗಳೂರು ವಿವಿ ಕೂಡ ಚಿಂತನೆ ನಡೆಸಿದೆ ಎಂದರು.
ನಿರ್ಧಾರ ಹಿಂಪಡೆಯಲು ಎಬಿವಿಪಿ ಮನವಿ: ರಾಜ್ಯದ ಮುಕ್ತ ಮತ್ತು ದೂರಶಿಕ್ಷಣದ ಸಂಪೂರ್ಣ ವ್ಯವಸ್ಥೆಯನ್ನು ರಾಜ್ಯ ಮುಕ್ತ ವಿಶ್ವವಿದ್ಯಾಲಯ ವ್ಯಾಪ್ತಿಗೆ ತರುವ ಕೇಂದ್ರೀಕೃತ ವ್ಯವಸ್ಥೆಯಾಗುತ್ತಿದ್ದು, ಇದು ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಆದ್ದರಿಂದ ರಾಜ್ಯ ಸರ್ಕಾರ ತನ್ನ ತೀರ್ಮಾನ ಹಿಂಪಡೆಯಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿದೆ.
ಶಿಕ್ಷಣದ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಬೇಕೇ ಹೊರತು ಕೇಂದ್ರೀಕರಣ ಮಾಡಬಾರದು. ಜತೆಗೆ ಪ್ರಾದೇಶಿಕ ವಿವಿಗಳು ದೂರಶಿಕ್ಷಣದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ರಾಜ್ಯದ ಕೆಲವು ವಿವಿಗಳಲ್ಲಿ ದೂರಶಿಕ್ಷಣದಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿವೆ. ಮಂಗಳೂರು ವಿವಿ ವ್ಯಾಪ್ತಿಯಲ್ಲೂ ಇಂತಹ ಪ್ರಕರಣಗಳು ದಾಖಲಾಗಿವೆ. ಈ ಕುರಿತಂತೆಯೂ ವಿಚಾರಣೆ ನಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಂಗಳೂರು ವಿವಿ ಇಂತಹ ಆರೋಪಗಳಿಂದ ಇನ್ನ್ನು ಮುಂದಾದರೂ ಮುಕ್ತವಾಗಬೇಕಿದೆ. ವಿಶ್ವವಿದ್ಯಾಲಯದ ಘನತೆ ಮತ್ತು ಗೌರವ ಕಾಪಾಡಿಕೊಳ್ಳುವ ದೃಷ್ಠಿಯಿಂದ ಆಡಳಿತ ಮಂಡಳಿ ಪಾರದರ್ಶಕತೆ ಮತ್ತು ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಅಭಾವಿಪ ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.