ಶ್ರವಣ್ ಕುಮಾರ್ ನಾಳ, ಮಂಗಳೂರು
ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ವಿವಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಮೊತ್ತದ ಹಗರಣ, ಭ್ರಷ್ಟಾಚಾರ ಪ್ರಕರಣಗಳು ಮುಚ್ಚವ ಹಂತಕ್ಕೆ ತಲುಪಿವೆ.
ಮಂಗಳೂರು ವಿವಿ ಕುಲಪತಿಯಾಗಿ 2010ರಿಂದ 2014ರವರೆಗೆ ಪ್ರೊ.ಶಿವಶಂಕರ್ ಮೂರ್ತಿ, 2014ರಿಂದ 2018ರವರೆಗೆ ಪ್ರೊ.ಕೆ.ಬೈರಪ್ಪ ಸೇವೆ ಸಲ್ಲಿಸಿದ್ದರು. ಇವರ ಕಾಲಾವಧಿಯಲ್ಲಿ ವಿವಿಯಲ್ಲಿ ನೇಮಕಾತಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಸಂಬಂಧಿಸಿ ಒಟ್ಟು 18 ಪ್ರಕರಣಗಳಲ್ಲಿ ಕೋಟ್ಯಂತರ ರೂ.ಹಗರಣ, ಭ್ರಷ್ಟಾಚಾರ ನಡೆದ ಆರೋಪವಿದೆ. ಕೆಲವು ತನಿಖಾ ಹಂತದಲ್ಲಿದ್ದರೆ, ಇನ್ನೂ ಕೆಲವು ತನಿಖಾ ವರದಿಗಳು ವಿವಿ ಸಿಂಡಿಕೇಟ್‌ನಲ್ಲಿ ಮಂಡಿಸಲು ಬಾಕಿಯಾಗಿವೆ. ಪ್ರೊ.ಬೈರಪ್ಪ ಕಾಲಾವಧಿಯ ಮೂರು ಪ್ರಕರಣಗಳ ತನಿಖಾ ವರದಿ ರಾಜ್ಯಪಾಲರ ಅಂಗಳದಲ್ಲಿದೆ. ವರದಿ ಸಲ್ಲಿಕೆಗೆ ತನಿಖಾಧಿಕಾರಿಗಳು ವಿಳಂಬ ಮಾಡಿದ್ದರಿಂದ ಈವರೆಗೆ ಪ್ರಕರಣಗಳು ಅಂತಿಮ ಹಂತ ತಲುಪಿಲ್ಲ. ಪ್ರಕರಣದ ತನಿಖೆಗೆ ಉನ್ನತ ಶಿಕ್ಷಣ ಇಲಾಖೆ ಆಸಕ್ತಿ ವಹಿಸಿದೆ, ಮಾಜಿ ವಿಸಿಗಳ ನಿಧನದ ಬಳಿಕ ಕೋಟ್ಯಂತರ ರೂ. ಹಗರಣಗಳು ಮುಚ್ಚಿಹೋಗುವ ಸಾಧ್ಯತೆ ಹೆಚ್ಚಿದೆ.
ವಿಧಾನಸಭೆಯಲ್ಲಿ ಚರ್ಚೆ: 2010ರಿಂದ 2014ರವರೆಗೆ ಕುಲಪತಿ ಪ್ರೊ.ಶಿವಶಂಕರ್ ಮೂರ್ತಿ ಕಾಲಾವಧಿಯಲ್ಲಿ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ, ಹೊಸ ವಿಭಾಗಗಳ ಸೇರ್ಪಡೆ ಸೇರಿದಂತೆ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದು ಸಮಗ್ರ ತನಿಖೆಗೆ ಆದೇಶ ನೀಡಲಾಗಿತ್ತು. ಈ ಮಧ್ಯೆ, ಪ್ರೊ.ಶಿವಶಂಕರ್ ಮೂರ್ತಿ ನಿವೃತ್ತರಾಗಿ, 2015ರ ಆಗಸ್ಟ್ 19ರಂದು ನಿಧನರಾದರು. ಇವರ ಮೇಲಿನ ಎಲ್ಲ ಪ್ರಕರಣಗಳು ತನಿಖೆಯಾಗದೆ ಮೂಲೆ ಸೇರಿವೆ.
ಕೆಎಸ್‌ಎಎಡಿ ತನಿಖೆಯಿಂದ ಬಹಿರಂಗ: 2014ರಿಂದ 2018ರವರೆಗೆ ಪ್ರೊ.ಬೈರಪ್ಪ ಕಾಲಾವಧಿ. ವಿವಿ ಪರೀಕ್ಷಾ ಕಾರ್ಯನಿರ್ವಹಣೆ ಗುತ್ತಿಗೆ, ಸೌರ ಮೇಲ್ಚಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಗಣಕಯಂತ್ರ ಮತ್ತು ಲ್ಯಾಪ್‌ಟಾಪ್ ಖರೀದಿ, ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯ, ಕ್ಲಾಸ್‌ರೂಂ ಕಾಂಪ್ಲೆಕ್ಸ್ ಸೇರಿದಂತೆ 100 ಕೋಟಿ ರೂ.ಮಿಕ್ಕಿದ ವಿವಿಧ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗಿರುವುದನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ತನಿಖೆ ದೃಢಪಡಿಸಿತ್ತು. ಅಧಿಕಾರಿ, ಸಿಬ್ಬಂದಿಯನ್ನು ಇಲಾಖಾ ವಿಚಾರಣೆಗೆ ಗುರಿಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಲಾಗಿತ್ತು. ಸೌರ ಮೇಲ್ಚಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಪ್ರಕರಣಗಳ ತನಿಖೆಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದರು. ಈ ಎಲ್ಲ ಪ್ರಕರಣ ಐದು ಬಾರಿ ವಿಧಾನಸಭೆಯಲ್ಲಿ ಚರ್ಚೆಗೆ ಬಂದು ತನಿಖೆ ಆದೇಶ ನೀಡಲಾಗಿತ್ತು. ಪ್ರಕರಣಗಳು ತನಿಖಾ ಹಂತದಲ್ಲಿರುವಾಗ 2023ರ ಜುಲೈ 31ರಂದು ಪ್ರೊ.ಬೈರಪ್ಪ ನಿಧನರಾದರು.
ವಿವಿಗೆ ಕೋಟ್ಯಂತರ ರೂ.ನಷ್ಟ
ಮಂಗಳೂರು ವಿವಿಯ ಅಕ್ರಮಗಳಿಂದಾಗಿ (2010-18ರವರೆಗೆ) ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ ಎಂಬುದನ್ನು ರಾಜ್ಯ ಲೆಕ್ಕ ಪರಿಶೋಧಕರ ತನಿಖಾ ತಂಡ ಸರ್ಕಾರಕ್ಕೆ 2016 ಹಾಗೂ 2020ರಲ್ಲಿ ತನಿಖಾ ವರದಿ ಸಲ್ಲಿಸಿತ್ತು. ವಿವಿ ನೇಮಕಾತಿಯಲ್ಲಿ ಯುಜಿಸಿ ಮತ್ತು ನೇಮಕಾತಿ ನಿಯಮ ಉಲ್ಲಂಘನೆ, ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ಮೈಸೂರಿನ ಎಸ್‌ಎಸ್‌ಬಿಇಟಿ ಸಂಸ್ಥೆಗೆ ನಿಯಮ ಉಲ್ಲಂಘಿಸಿ ಅಧ್ಯಯನ ಕೇಂದ್ರದ ಮಾನ್ಯತೆ ನೀಡಿರುವುದು, ಓಪನ್ ಹೌಸ್ ಕಾರ್ಯಕ್ರಮಕ್ಕೆ ಒಂದು ಕೋಟಿ ರೂ.ಮೊತ್ತದ ಅಕ್ರಮ ಬಿಲ್ ತಯಾರಿ, ಭವಿಷ್ಯ ನಿಧಿ ಮತ್ತು ಇತರ ಭತ್ಯೆಗಳನ್ನು ವಿವಿಗೆ ನೀಡದೆ ವಂಚನೆ, ಪರೀಕ್ಷಾ ಕಾರ್ಯನಿರ್ವಹಣೆ ಗುತ್ತಿಗೆ, ಸೌರ ಮೇಲ್ಚಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಗಣಕಯಂತ್ರ ಮತ್ತು ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘನೆ, ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯ, ಕ್ಲಾಸ್‌ರೂಂ ಕಾಂಪ್ಲೆಕ್ಸ್ ಸೇರಿದಂತೆ ಇನ್ನಿತರ ಸಿವಿಲ್ ಕಾಮಗಾರಿಗಳನ್ನು ಸರ್ಕಾರದ ಅನುಮೋದನೆ ಇಲ್ಲದೆ, ವಿವಿ ಹಂತದಲ್ಲೇ ಕ್ರಮ ಕೈಗೊಂಡಿರುವುದನ್ನು ಪತ್ತೆ ಹಚ್ಚಿ ಉನ್ನತ ಶಿಕ್ಷಣ ಇಲಾಖೆಗೆ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು.
----------------------------
ವಿವಿ ಅಕ್ರಮಗಳ ತನಿಖೆಗೆ ತಂಡ ರಚಿಸಲು ಹಿಂದಿನ ಸಿಂಡಿಕೇಟ್ ನಿರ್ಣಯ ಕೈಗೊಂಡಿತ್ತು. ಕೆಲವು ತನಿಖಾ ವರದಿ ಸಲ್ಲಿಕೆಯಾಗಿವೆ, ಇನ್ನು ಕೆಲವು ತನಿಖಾ ಹಂತದಲ್ಲಿವೆ. ಅನಂತರ ಹೊಸ ಸಿಂಡಿಕೇಟ್ ಅಸ್ತಿತ್ವಕ್ಕೆ ಬಂದ ನಂತರ ವಿವಿ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇಲ್ಲ.
ರಮೇಶ್
ಮಾಜಿ ಸಿಂಡಿಕೇಟ್ ಸದಸ್ಯರು, ಮಂಗಳೂರು ವಿವಿ
=--------------------
ವಿವಿಯಲ್ಲಿ ಹಗರಣಗಳ ತನಿಖೆ ಯಾವ ಹಂತದಲ್ಲಿದೆ ಎಂಬ ವರದಿ ಪಡೆದು, ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಡಾ.ಎಂ.ಸಿ.ಸುಧಾಕರ್
ಉನ್ನತ ಶಿಕ್ಷಣ ಸಚಿವರು