ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರಿನ ಮಂಗಳೂರು ಯುನಿವರ್ಸಿಟಿ ತಂಡವು ಮುಂಬಯಿ ಯುನಿರ್ವಸಿಟಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶ ತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳೂರು ಯುನಿವರ್ಸಿಟಿ ಹಾಗೂ ಪೂರ್ಣಪ್ರಜ್ಞ ಕಾಲೇಜು (ಅಟೋನೋಮೋಸ್) ಆ್ಯಂಡ್ ಪೋಸ್ಟ್ ಗ್ರಾಜುಯೇಟ್ ಸೆಂಟರ್ ಸಹಭಾಗಿತ್ವದಲ್ಲಿ 3 ದಿನಗಳ ಕಾಲ ಖೋ-ಖೋ ಪಂದ್ಯಾವಳಿ ನಡೆದಿತ್ತು. ಏ.12ರಂದು ಮಧ್ಯಾಹ್ನ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಶೀಲ್ಡ್ ಹಾಗೂ ಬಹುಮಾನ ವಿತರಿಸಿ ಆಶೀರ್ವದಿಸಿದರು.
ದೇಶದ ನಾಲ್ಕು ದಿಕ್ಕುಗಳಿಂದ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರತಿ ದಿಕ್ಕಿನಿಂದಲೂ ಆಯ್ದ 4 ತಂಡಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು.
ಮಂಗಳೂರು ಹಾಗೂ ಮುಂಬಯಿ ತಂಡದ ನಡುವೆ ನಡೆದ ಫೈನಲ್ ಪಂದ್ಯ ಅತ್ಯಂತ ರೋಚಕ ಹಂತ ಹಲುಪಿತ್ತು. ಅಂತಿಮ ಹಣಾಹಣಿಯ 2 ಇನ್ನಿಂಗ್ಸ್ನ 4 ಸುತ್ತುಗಳ ಪಂದ್ಯದಲ್ಲಿ ಮಂಗಳೂರು ಗೆಲುವಿನ ನಗೆ ಬೀರಿತು. ಮೊದಲ ಸುತ್ತಿನಲ್ಲಿ ಮುಂಬಯಿ ತಂಡ 5 ಅಂಕ, 2ನೇ ಸುತ್ತಿನಲ್ಲಿ ಮಂಗಳೂರು ತಂಡ 7 ಅಂಕ, 3ನೇ ಸುತ್ತಿನಲ್ಲಿ ಮುಂಬಯಿ 5 ಅಂಕ ಗಳಿಸಿತ್ತು. ಕೊನೆಯ ಸುತ್ತಿನಲ್ಲಿ 9 ನಿಮಿಷದಲ್ಲಿ 4 ಅಂಕ ಗಳಿಸುವ ಸವಾಲು ಸ್ವೀಕರಿಸಿದ ಮಂಗಳೂರು ತಂಡ ಕೇವಲ ನಾಲ್ಕೇ ನಿಮಿಷದಲ್ಲಿ 4 ಅಂಕ ಗಳಿಸುವ ಮೂಲಕ ಪ್ರಬಲ ಮುಂಬಯಿ ತಂಡಕ್ಕೆ ಸೋಲಿನ ಕಹಿ ಉಣಿಸಿತು. ಶಕ್ತಿಯ ಪ್ರತೀಕನಾದ ಹನುಮ ಜಯಂತಿಯ ದಿನದಂದೇ ಗೆಲುವು ಲಭಿಸಿರುವುದಕ್ಕೆ ಮಂಗಳೂರು ತಂಡದ ಕೋಚ್ ಪ್ರದೀಪ ಸಂತಸ ವ್ಯಕ್ತಪಡಿಸಿದರು.