ಜಿಲ್ಲೆ

ಅಕ್ರಮ ಮರಳುಗಾರಿಕೆಯಿಂದ ದ್ವೀಪ ನಿವಾಸಿಗಳನ್ನು ರಕ್ಷಿಸಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಘಟಕ ನೇತೃತ್ವದಲ್ಲಿ ಪಾದಯಾತ್ರೆ- ಪ್ರತಿಭಟನಾ ಸಭೆ

ಹರೀಶ ಎಂ.

ಮಂಗಳೂರು : ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಘಟಕ ನೇತೃತ್ವದಲ್ಲಿ ಶುಕ್ರವಾರ ಪಾದಯಾತ್ರೆ- ಪ್ರತಿಭಟನಾ ಸಭೆ ನಡೆಯಿತು.


ಬಲ್ಮಠ ವೃತ್ತದಿಂದ ಆರಂಭಗೊಂಡ ಪಾದಯಾತ್ರೆಯು ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆ ನಡೆಯಿತು. ದ್ವೀಪ ನಿವಾಸಿಗಳು, ವಿವಿಧ ಸಂಘಟನೆಗಳ ಪ್ರಮುಖರು ಸಹಿತ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಕಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಮಾತನಾಡಿ, ಕೂಲಿ ಕೆಲಸಕ್ಕೆ ಹೋಗದಿದ್ದರೆ ದಿನದೂಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ದ್ವೀಪ ನಿವಾಸಿಗಳಿಗೆ ಮರಳು ದಂಧೆ ನಡೆಸುವವರಿಂದ ಜೀವನವೇ ದುಸ್ತರವಾಗಿದೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ರಾಣಿಪುರ ಉಳಿಯದಲ್ಲಿ ಮನೆಗಳು ಅಪಾಯದಲ್ಲಿವೆ ಎಂದರು.


ಡಿವೈಎಫ್‌ಐನ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಅಕ್ರಮ ಮರಳುಗಾರರ ಜತೆಗೆ ಒಟ್ಟು ವ್ಯವಸ್ಥೆ ಶಾಮೀಲಾದ ಕಾರಣದಿಂದ ಇದು ಅವ್ಯಾಹತವಾಗಿ ನಡೆಯುತ್ತಿದೆ. ಮುಂದೆಯೂ ಇದು ನಡೆದರೆ ಉಳ್ಳಾಲ, ಕೊಣಾಜೆ ಹಾಗೂ ವಾಮಂಜೂರು ಠಾಣೆಯ ಮುಂಭಾಗ ದ್ವೀಪ ನಿವಾಸಿಗಳ ಜತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.


ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಮಾತನಾಡಿ, ಅಕ್ರಮ ಮರಳುಗಾರಿಕೆ ವಿರುದ್ದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.


ಸಭೆಯಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು, ವಲಯ ಅಧ್ಯಕ್ಷರು ಭಾಗವಹಿಸಿದ್ದರು. ಕಥೋಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಭಾದ ನಿಕಟಪೂರ್ವ ಅಧ್ಯಕ್ಷ ಸ್ಟಾೃನಿ ಲೋಬೋ, ಸ್ಥಳೀಯರ ಪರವಾಗಿ ಗಿಲ್ಬರ್ಟ್ ಡಿಸೋಜ ಮಾತನಾಡಿದರು.


ಪ್ರಮುಖರಾದ ಸದಾಶಿವ ಉಳ್ಳಾಲ್, ಾ.ಜೆ.ಬಿ.ಸಲ್ದಾನ, ಆಲ್ವಿನ್ ಮೊಂತೇರೊ, ಮಂಜುಳಾ ನಾಯಕ್, ಸಂತೋಷ್ ಡಿಸೋಜ, ಯಾದವ ಶೆಟ್ಟಿ, ಶಶಿಧರ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ಜೀತ್ ಮಿಲನ್ ಮೊದಲಾದವರು ಹಾಜರಿದ್ದರು.