ಮಂಗಳೂರು: ಪಿಡಬ್ಲುೃಡಿ ಗುತ್ತಿಗೆದಾರ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ, ಉಳಾಯಿಬೆಟ್ಟು ನಿವಾಸಿ ಪದ್ಮನಾಭ ಕೋಟ್ಯಾನ್ ಅವರ ಮನೆಯಿಂದ ಶುಕ್ರವಾರ ರಾತ್ರಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ನಡೆದಿದ್ದು, ಕೃತ್ಯದ ತನಿಖೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಈ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.
ಮಂಗಳೂರು ನಗರ ಅಪರಾಧ ಪತ್ತೆದಳ, ಮಂಗಳೂರು ದಕ್ಷಿಣ ಸ್ಕ್ವಾಡ್, ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸೇರಿ ಮೂರು ತಂಡಗಳು ತನಿಖೆ ನಡೆಸುತ್ತಿವೆ. ಒಂದು ತಂಡ ಡಿವಿಆರ್ ಪರಿಶೀಲನೆ ಹಾಗೂ ಈ ಮಾದರಿಯ ಕೃತ್ಯದ ಬಗ್ಗೆ ತನಿಖೆ ನಡೆಸಿದರೆ, ಇನ್ನೊಂದು ತಂಡ ಗುತ್ತಿಗೆದಾರರ ಕಾರ್ಮಿಕರ ಬಳಿ ಮಾಹಿತಿ ಕಲೆ ಹಾಕುತ್ತಿದೆ. ಮೂರನೇ ತಂಡ ಮೊಬೈಲ್ ಸಿಡಿಆರ್ ಹಾಗೂ ವಾಹನ ತೆರಳಿದ ಸಿಸಿ ಟಿವಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ನಗದು, 1 ಡೈಮಂಡ್ ನೆಕ್ಲೆಸ್, 40ಗ್ರಾಂನ ಚಿನ್ನದ ಕಡಗ, 40ಗ್ರಾಂನ ರೋಪ್ ಚೈನ್, ಸ್ಮಾರ್ಟ್ ವಾಚ್‌ಗಳು ಸೇರಿದಂತೆ ಇತರ ಸೊತ್ತುಗಳನ್ನು ದರೋಡೆ ಮಾಡಲಾಗಿದೆ. ಶನಿವಾರ ಕಾರ್ಮಿಕರಿಗೆ ವೇತನ ನೀಡುವ ದಿನ. ಹಾಗಾಗಿ ಶುಕ್ರವಾರ ಲಕ್ಷಾಂತರ ರೂ. ನಗದು ತಂದು ಮನೆಯಲ್ಲಿಟ್ಟಿದ್ದರು. ಅವೆಲ್ಲವನ್ನು ದೋಚಲಾಗಿದೆ.
ಪರಿಚಿತರಿಂದಲೇ ಕೃತ್ಯ ಸಾಧ್ಯತೆ: ಸಾಮಾನ್ಯವಾಗಿ ಪದ್ಮನಾಭ ಕೋಟ್ಯಾನ್ ಅವರ ಮನೆಯ ಮುಖ್ಯ ಗೇಟ್ ರಾತ್ರಿ 8ಗಂಟೆಗೆ ಬಂದ್ ಮಾಡಲಾಗುತ್ತದೆ. ಇದಾದ ನಂತರ ಮನೆಯ ಶ್ವಾನವನ್ನು ತಿರುಗಾಡಲು ಬಿಟ್ಟು, ಮನೆ ಪ್ರಧಾನ ಬಾಗಿಲು ಭದ್ರಪಡಿಸುತ್ತಾರೆ. ಈ ಎಲ್ಲ ಸೂಕ್ಷ್ಮತೆಯ ಬಗ್ಗೆ ಗೊತ್ತಿರುವ ಪರಿಚಿತರೇ ದರೋಡೆ ಕೃತ್ಯದಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ.
ಆರೋಪಿಗಳು 8.05ಕ್ಕೆ ಮನೆಯೊಳಗೆ ಪ್ರವೇಶ ಮಾಡಿದ್ದು, 8.32ರ ವೇಳೆಗೆ ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯ ಸಿಸಿ ಕ್ಯಾಮೆರಾ ದಾಖಲೆ, ದರೋಡೆಕೋರರು ಮೊಬೈಲ್ ಬಳಕೆ ಮಾಡಿರುವುದು, ಮನೆಯೊಳಗೆ ಆರೋಪಿಗಳು ಬಳಸಿದ ಮಾಸ್ಕ್, ಕೈಗ್ಲೌಸ್, ಕಂಪೌಂಡ್ ಗೋಡೆ ಮೂಲಕ ಹಾರಿದ ಹೆಜ್ಜೆಗುರುತು ದಾಖಲೆ ಸಿಕ್ಕಿದೆ. ಶ್ವಾನದಳ, ಬೆರಳಚ್ಚು ತಜ್ಞರು ತನಿಖೆಗೆ ಪೂರಕವಾಗುವ ಕೆಲವೊಂದು ಸಾಕ್ಷೃಗಳನ್ನು ಕಲೆ ಹಾಕಿದ್ದಾರೆ.
ಾರ್ಚೂನರ್ ಬಿಟ್ಟು ಇನೋವಾ: ತಂಡದಲ್ಲಿದ್ದ ದುಷ್ಕರ್ಮಿಗಳು ಅರ್ಧಂಬರ್ಧ ಹಿಂದಿ, ಇಂಗ್ಲೀಷ್ ಮಾತನಾಡುತ್ತಿದ್ದರಾದರೂ ಆ ಭಾಷೆ ಕರಾವಳಿ ದಾಟಿಯಲ್ಲೇ ಇತ್ತು. ಮನೆಯ ಹಾಲ್, ಅಡುಗೆಮನೆ, ಬೆಡ್‌ರೂಮು, ಮೊದಲ ಮಹಡಿಯಲ್ಲಿರುವ ರೂಮುಗಳಿಗೆ ಹೋಗಿ ಬಟ್ಟೆ,ವಸ್ತುಗಳನ್ನು ಜಾಲಾಡಿದ್ದಾರೆ. ಕೊನೆಗೆ ಮನೆಯಲ್ಲಿದ್ದ ಾರ್ಚೂನರ್ ಕಾರು ಕೀ ಪಡೆದು ಅದರಲ್ಲೇ 1 ಕಿಲೋ ಮೀಟರ್ ದೂರ ತೆರಳಿ ಬಳಿಕ ದರೋಡೆಕೋರರು ಬಂದಂತಹ ಇನೋವಾ ಕಾರು ಹತ್ತಿ ಪರಾರಿಯಾಗಿದ್ದಾರೆ. ಆದರೆ ದುಷ್ಕರ್ಮಿಗಳು ಪರಾರಿ ವೇಳೆ ಒಂದೇ ಕಾರಿನಲ್ಲಿ ತೆರಳಿರುವ ಬಗ್ಗೆ ಅನುಮಾನವಿದೆ.
ಮಾದಕ ವಸ್ತು ಸೇವನೆ ಶಂಕೆ: ದರೋಡೆ ಕೃತ್ಯದ ವೇಳೆ 9 ಮಂದಿ ಭಾಗಿಯಾಗಿದ್ದು, ಇವರಲ್ಲಿ 8 ಮಂದಿ ಮಾಸ್ಕ್ ಧರಿಸಿ, ಕೈಯಲ್ಲಿ ಹರಿತವಾದ ಚೂರಿ ಹೊಂದಿದ್ದರು. ಒಬ್ಬಾತ ಯಾವುದೇ ಮಾಸ್ಕ್ ಧರಿಸದೆ ಟೀಮ್ ಲೀಡರ್ ಮಾದರಿಯಲ್ಲಿ ನಿರ್ದೇಶನ ನೀಡುತ್ತಿದ್ದ. ಇವರೆಲ್ಲ ನಿಷೇಧಿತ ಮಾದಕ ವಸ್ತು ಸೇವಿಸಿದವರಂತೆ ಕಂಡು ಬರುತ್ತಿದ್ದು, ಟೀಮ್ ಲೀಡರ್ ಆಕ್ರೋಶಭರಿತನಾಗಿ ವರ್ತಿಸುತ್ತಿದ್ದ. ನಗದು, ಚಿನ್ನ ಕೇಳುವ ನೆಪದಲ್ಲಿ ಚೂರಿಯಿಂದ ದಂಪತಿಯ ಮಗನ ಕುತ್ತಿಗೆಗೆ ಚೂರಿಯಿಟ್ಟು ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.