ಮಂಗಳೂರು/ಉಡುಪಿ: ಕರಾವಳಿಯಲ್ಲಿ ಸೋಮವಾರ 26 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವರ ಪೈಕಿ ದ.ಕ.ಜಿಲ್ಲೆಯಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಮರಳಿದವರ ಸಂಖ್ಯೆ ಹೆಚ್ಚಿದ್ದರೆ, ಉಡುಪಿಯಲ್ಲಿ ಮಹಾರಾಷ್ಟ್ರದಿಂದ ಬಂದವರೇ ಅಧಿಕ.
ದ.ಕ.ಜಿಲ್ಲೆಯಲ್ಲಿ ವಿವಿಧ ಗಲ್ಫ್ ದೇಶಗಳಿಂದ ಆಗಮಿಸಿದ 11 ಮಂದಿ ಸೇರಿದಂತೆ ಒಟ್ಟು 12 ಮಂದಿಗೆ ಸೋಮವಾರ ಕರೊನಾ ದೃಢಪಟ್ಟಿದೆ. ಕತಾರ್, ಕುವೈತ್, ಶಾರ್ಜಾ, ಸೌದಿ ಅರೇಬಿಯಾ ಹಾಗೂ ಮಸ್ಕತ್‌ನಿಂದ ಆಗಮಿಸಿದ 11 ಮಂದಿಯಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ. ಮಂಗಳೂರಿನ ಒಬ್ಬ ಯುವಕ ಇನ್‌ಫ್ಲುಯೆಂಜಾ ರೀತಿಯ ಲಕ್ಷಣಗಳನ್ನು ಹೊಂದಿದ್ದು ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ.
ಕರೊನಾ ಚಿಕಿತ್ಸೆ ಪಡೆದು ಗುಣವಾದ 12 ಮಂದಿಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಳಿಸಲಾಗಿದೆ. ಇಬ್ಬರು ರೋಗಿಗಳು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ. ಒಟ್ಟು ಸಕ್ರಿಯ ಪ್ರಕರಣಗಳು 187 ಆಗಿದ್ದರೆ 250 ಮಂದಿ ಚಿಕಿತ್ಸೆ ಮುಗಿಸಿ ಮನೆಗೆ ಮರಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸೋಮವಾರ 14 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 8 ಮಂದಿ ಮಹಾರಾಷ್ಟ್ರದಿಂದ ಬಂದವರು. 4 ಮಂದಿಗೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಸೋಂಕಿತನ ಜತೆಗೆ ಸಂಪರ್ಕ ಇದ್ದ ಹಿನ್ನೆಲೆಯಲ್ಲಿ ಸೋಂಕು ತಗುಲಿದೆ. ಇನ್ನಿಬ್ಬರು ಬೈಂದೂರಿನ ಪೊಲೀಸ್ ಮತ್ತು ಸರ್ಕಾರಿ ಆಸ್ಪತ್ರೆ ನರ್ಸ್. ಸೋಂಕಿತರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಸ್ವೀಕರಿಸಿದ 53 ಮಂದಿಯ ವರದಿ ನೆಗೆಟಿವ್ ಬಂದಿದೆ. 12 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, 212 ಮಂದಿಯ ವರದಿ ಬರಲು ಬಾಕಿ ಇದೆ. ಸೋಂಕಿತರ ಸಂಖ್ಯೆ 1077ಕ್ಕೆ ಏರಿಕೆಯಾಗಿದ್ದು, ಇದೂವರೆಗೆ 969 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.
ಇನ್ನೋರ್ವ ಪೊಲೀಸ್, ನರ್ಸ್‌ಗೆ ಸೋಂಕು
ಬೈಂದೂರು ಠಾಣೆ, ಶಿರೂರು ಆರೋಗ್ಯ ಕೇಂದ್ರ ಬಂದ್
ಬೈಂದೂರು: ಪೊಲೀಸ್ ಕಾನ್‌ಸ್ಟೆಬಲ್ ಓರ್ವರಿಗೆ ಕರೊನಾ ಪಾಸಿಟಿವ್ ವರದಿ ಬಂದಿರುವ ಮರುದಿನವೇ, ಅದೇ ಠಾಣೆಯ ಮಹಿಳಾ ಕಾನ್‌ಸ್ಟೆಬಲ್‌ಗೂ ಸೋಂಕು ದೃಢಪಟ್ಟಿದೆ. ಇನ್ನೊಂದೆಡೆ ಶಿರೂರು ಆರೋಗ್ಯ ಕೇಂದ್ರದ ನರ್ಸ್‌ಗೂ ಕೋವಿಡ್-19 ಕಾಣಿಸಿಕೊಂಡಿದೆ.
ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಇಬ್ಬರಿಗೆ ಪಾಸಿಟಿವ್ ದೃಢವಾಗಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿರುವ ಮಾಹಿತಿ ಮಾಹಿತಿ ಲಭಿಸಿದೆ. ಬೈಂದೂರು ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಚೆೇರಿಯನ್ನು ಮುಚ್ಚಲಾಗಿದ್ದು, ಸ್ಯಾನಿಟೈಸೇಷನ್ ಬಳಿಕ ಒಂದೆರಡು ದಿನಗಳಲ್ಲಿ ಮತ್ತೆ ಠಾಣೆ ಪುನರಾರಂಭಗೊಳ್ಳಲಿದೆ. ಕಚೇರಿ ಸಿಬ್ಬಂದಿಯನ್ನು 14 ದಿನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹಳೇ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕುಂದಾಪುರ ಉಪವಿಭಾಗದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನರ್ಸ್‌ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಶಿರೂರು ಆರೋಗ್ಯ ಕೇಂದ್ರವನ್ನೂ ಬಂದ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಿ ಎರಡು ದಿನದ ಬಳಿಕ ತೆರೆಯಲಾಗುತ್ತಿದೆ. ಪಾಸಿಟಿವ್ ಬಂದಿರುವ ಸಿಬ್ಬಂದಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 7 ದಿನಗಳ ಬಳಿಕ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತದೆ.
ಸಹೋದರರಿಗೆ ಸೋಂಕು
ಪಡುಬಿದ್ರಿ: ಹೆಜಮಾಡಿಯಲ್ಲಿ ಅಂಗಡಿ ಮಾಲೀಕರಾಗಿರುವ ಸಹೋದರರನ್ನು ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ, ನಡ್ಸಾಲು ಕನ್ನಂಗಾರು ಬೈಪಾಸ್ ಸಮೀಪದ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಮವಾರ ಜ್ವರ ಹಾಗೂ ಉಬ್ಬಸ ಕಂಡು ಬಂದ ಹಿನ್ನೆಲೆಯಲ್ಲಿ ಹೊಂದಿರುವ 42 ಮತ್ತು 32 ವಯಸ್ಸಿನ ಸಹೋದರರು ಸ್ಥಳೀಯ ವೈದ್ಯರಲ್ಲಿಗೆ ಚಿಕಿತ್ಸೆಗೆ ತೆರಳಿದ್ದರು. ವೈದ್ಯರು ಅವರನ್ನು ಕರೊನಾ ಪರೀಕ್ಷೆಗೆ ಕಳುಹಿಸಿದರು. ಇಬ್ಬರೂ ಕೋವಿಡ್ ಪರೀಕ್ಷೆಗೆ ಒಳಗಾಗಿ, ವರದಿ ಪಾಸಿಟಿವ್ ಬಂದಿದೆ. ಅವರು ಇತ್ತೀಚೆಗೆ ಎಲ್ಲಿಗೂ ತಿರುಗಾಡಲು ಹೋಗಿರಲಿಲ್ಲ. ಅವರ ಅಂಗಡಿಗೂ ನೂರಾರು ಮಂದಿ ಬಂದು ಹೋಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಮೀನು ಮಾರಾಟದ ಯುವಕನಿಗೆ ಪಾಸಿಟಿವ್
ಮಂಗಳೂರು: ಮಂಗಳೂರಿನ ಎಕ್ಕೂರಿನ ಯುವಕನಿಗೆ ಕರೊನಾ ಪಾಸಿಟಿವ್ ಬಂದಿದ್ದು, ಆತ ಮೀನು ಮಾರಾಟ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇದರಿಂದಾಗಿ ಆತನಿಂದ ಮೀನು ಖರೀದಿ ಮಾಡಿದ್ದವರು ಆತಂಕಕ್ಕೊಳಗಾಗಿದ್ದಾರೆ.
ಈ ಯುವಕ ಬಂದರಿಗೆ ಹೋಗಿ ಮೀನು ತಂದು ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಯುವಕನಿಗೆ ಬೇರೊಬ್ಬ ಕರೊನಾ ಪಾಸಿಟಿವ್ ರೋಗಿಯಿಂದಲೇ ಸೋಂಕು ತಗಲಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಂಪರ್ಕ ವಿಶ್ಲೇಷಣೆ ವೇಳೆ ತಿಳಿದು ಬಂದಿದೆ. ಎಕ್ಕೂರಿನ ಯುವಕನಿಗೆ ಕರೊನಾ ಪಾಸಿಟಿವ್ ಇದ್ದವರ ಸಂಪರ್ಕ ಇತ್ತು. ಅದು ದೃಢಪಟ್ಟಿದೆ. ಅದರಿಂದಾಗಿಯೇ ಸೋಂಕು ಬಂದಿದ್ದು, ಆತನನ್ನು ಭಾನುವಾರ ಪರೀಕ್ಷೆಗೊಳಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ 9 ಮಂದಿಗೆ ಧೃಢ
ಕಾಸರಗೋಡು: ಜಿಲ್ಲೆಯ 9 ಮಂದಿ ಸಹಿತ ಕೇರಳದಲ್ಲಿ 138 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ. ರೋಗಬಾಧಿತರಲ್ಲಿ 87 ಮಂದಿ ವಿದೇಶದಿಂದ ಹಾಗೂ 47 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದರೆ, ನಾಲ್ಕು ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ ಸೋಮವಾರ 88 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡಿನಲ್ಲಿ ಸೋಮವಾರ ಸೋಂಕು ಖಚಿತಗೊಂಡವರಲ್ಲಿ 8 ಮಂದಿ ವಿದೇಶಗಳಿಂದ ಆಮಿಸಿದವರು, ಒಬ್ಬರು ಮಹಾರಾಷ್ಟ್ರದಿಂದ ಬಂದವರು.