ಜಿಲ್ಲೆ

ಮಂಗಳೂರಲ್ಲಿ ಹೆಚ್ಚಿದ ವಾಹನ ದಟ್ಟಣೆ, ವಿವಿಧೆಡೆ ಏಕಕಾಲದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ

Dakshina Kannada

ಮಂಗಳೂರು: ನಗರದ ವಿವಿಧೆಡೆ ಏಕಕಾಲದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಬದಲಿ ರಸ್ತೆಗಳಲ್ಲಿ ವಾಹನ ಸಂಚಾರ ದ್ವಿಗುಣಗೊಂಡು ಸವಾರರು, ನಿಗದಿತ ಸ್ಥಳಕ್ಕೆ ಯಾವ ಕಡೆಯಿಂದ ತೆರಳಬೇಕು ಎಂದು ತಿಳಿಯದೆ ಪರಿತಪಿಸುವ ಪರಿಸ್ಥಿತಿ ಬಂದೊದಗಿದೆ.

ನಗರದ ಹೃದಯಭಾಗ ಹಂಪನಕಟ್ಟೆಯಿಂದ ಬಾವುಟಗುಡ್ಡೆವರೆಗಿನ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಜಾ ದಿನವಾದ್ದರಿಂದ ಭಾನುವಾರ ಸಂಚಾರದಲ್ಲಿ ಅಷ್ಟೇನೂ ಅಡಚಣೆಯಾಗಿಲ್ಲ. ಆದರೆ ಸೋಮವಾರ ಬೆಳಗ್ಗೆಯಿಂದಲೇ ವಾಹನ ಸವಾರರು ಪರದಾಡುವಂತಾಯಿತು. ಕಚೇರಿ ಸೇರಿದಂತೆ ವಿವಿಧ ಕೆಲಸಗಳಿಗೆ ತೆರಳುವವರು ಎಲ್ಲಿಂದ, ಹೇಗೆ ಹೋಗುವುದು ಎಂದು ತಿಳಿಯದೆ ಸಿಕ್ಕ ಸಿಕ್ಕ ರಸ್ತೆಯಲ್ಲಿ ವಾಹನ ಚಲಾಯಿಸುವಂತಾಗಿದೆ.

ಪಿವಿಎಸ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಸ್ಥಗಿತಗೊಳಿಸಲಾಗಿದ್ದು, ಪೊಲೀಸರೇ ವಾಹನಗಳನ್ನು ನಿಯಂತ್ರಿಸುತ್ತಿದ್ದಾರೆ. ಅತಿ ಹೆಚ್ಚಿನ ವಾಹನ ದಟ್ಟಣೆ ಕೆ.ಎಸ್‌ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಬಂಟ್ಸ್‌ಹಾಸ್ಟೆಲ್‌ನಲ್ಲಿ ಉಂಟಾಗುತ್ತಿದೆ. ನಗರದಲ್ಲಿ ಟ್ರಾಫಿಕ್ ದಟ್ಟಣೆಗೆ ಪ್ರಮುಖ ಕಾರಣವಾಗಿರುವುದು ರಥಬೀದಿ ಮತ್ತು ಹಂಪನಕಟ್ಟೆಯಲ್ಲಿ ನಡೆಯುತ್ತಿರುವ ಕಾಮಗಾರಿ. ರಥಬೀದಿಯಲ್ಲಿ ಸದ್ಯ ಒಂದು ತಿಂಗಳ ಕೆಲಸ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ನೀಡಿರುವ ಸೂಚನೆಯನ್ವಯ ನವೆಂಬರ್ ಅಂತ್ಯದೊಳಗೆ ಕೆಲಸ ಮುಗಿಯಬೇಕು. ಇದು ಪೂರ್ಣಗೊಂಡರೆ ಸಂಚಾರ ಸ್ವಲ್ಪ ಸುಧಾರಣೆಯಾಗಬಹುದು. ಹಂಪನಕಟ್ಟೆ ಕಾಮಗಾರಿ ಮುಗಿಯಲು ವರ್ಷಾಂತ್ಯದವರೆಗೆ ಕಾಯಲೇಬೇಕು.

ಸಿಕ್ಕಿ ಹಾಕುವ ಆಂಬುಲೆನ್ಸ್: ಅಂಬೇಡ್ಕರ್ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಒಳರಸ್ತೆಗಳಲ್ಲಿ ಹಲವು ಆಸ್ಪತ್ರೆಗಳಿದ್ದು, ಪ್ರತಿನಿತ್ಯ ನೂರಾರು ಆಂಬುಲೆನ್ಸ್‌ಗಳು ಸಂಚರಿಸುತ್ತವೆ. ಪ್ರಸ್ತುತ ಹೆಚ್ಚಿನ ಆಂಬುಲೆನ್ಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ತುರ್ತು ಆಸ್ಪತ್ರೆಗೆ ಸೇರಿಸಬೇಕಾದ ರೋಗಿಗಳಿರುವ ಆಂಬುಲೆನ್ಸ್, ದಟ್ಟಣೆಯಲ್ಲಿ ಸಿಲುಕಿ ಅಮೂಲ್ಯ ಕ್ಷಣ ವ್ಯರ್ಥವಾಗಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಹಂಪನಕಟ್ಟೆ ಭಾಗಶಃ ಬಂದ್: ಮಂಗಳೂರಿನ ಹೃದಯಭಾಗ ಹಂಪನಕಟ್ಟೆ ಜಂಕ್ಷನ್ ಭಾನುವಾರದಿಂದ ಭಾಗಶಃ ಬಂದ್ ಆಗಿದೆ. ಸ್ಟೇಟ್‌ಬ್ಯಾಂಕ್ ಕಡೆಯಿಂದ ಬರುವ ವಾಹನಗಳು ಮಾತ್ರ, ಕೆ.ಎಸ್.ರಾವ್ ರಸ್ತೆಯಾಗಿ ಸಂಚರಿಸುತ್ತಿವೆ. ವಾಹನಗಳು ಸಂಚರಿಸದ ರಸ್ತೆ ಪಕ್ಕದ ಅಂಗಡಿಗಳಿಗೆ ಜನ ಹೋಗುವುದು ಕಡಿಮೆಯಾಗಿದೆ. ಕರೊನಾದಿಂದ ನಷ್ಟದಲ್ಲಿದ್ದ ವ್ಯಾಪಾರ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎನ್ನುವಷ್ಟರಲ್ಲೇ ರಸ್ತೆ ಬಂದ್ ಮಾಡಿರುವುದು ವ್ಯಾಪಾರಿಗಳನ್ನು ಕಂಗೆಡಿಸಿದೆ.

ಎಲ್ಲೆಲ್ಲಿ ಕಾಮಗಾರಿ? 1-ರಥಬೀದಿ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಮತ್ತು ಕಾಂಕ್ರೀಟ್ 2-ಹಂಪನಕಟ್ಟೆ-ಬಾವುಟಗುಡ್ಡೆ ರಸ್ತೆಯಲ್ಲಿ ಒಳಚರಂಡಿ ಮತ್ತು ಕಾಂಕ್ರೀಟ್ ಕಾಮಗಾರಿ 3-ಹಂಪನಕಟ್ಟೆ ಪುರಭವನ ಬಳಿ ಅಂಡರ್‌ಪಾಸ್ 4-ಮಿಲಾಗ್ರಿಸ್ ಹಂಪನಕಟ್ಟೆ ರಸ್ತೆ (ಪೂರ್ಣಗೊಂಡಿಲ್ಲ) 5- ಕದ್ರಿ ಉದ್ಯಾನವ ರಸ್ತೆ (ಸರ್ಕೀಟ್ ಹೌಸ್‌ನಿಂದ-ಪದವು ಹೈಸ್ಕೂಲ್) 6- ಶಾರದಾ ವಿದ್ಯಾಲಯ ಎದುರು, ಮಂಗಳಾದೇವಿ, ಆರ್‌ಟಿಒ ಸೇರಿದಂತೆ ನಗರದ ವಿವಿಧೆಡೆ ಚರಂಡಿ, ಫುಟ್‌ಪಾತ್ ಕಾಮಗಾರಿ ನಡೆಯುತ್ತಿದೆ.

ಹಲವು ವರ್ಷದಿಂದ ಬಾಕಿಯಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪ್ರಸ್ತುತ ಕೈಗೆತ್ತಿಕೊಳ್ಳಲಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಯದಿದ್ದರೆ ಅದು ರದ್ದಾಗಿ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಪ್ರಸ್ತುತ ನಗರದಲ್ಲಿ ಉಂಟಾಗಿರುವ ವಾಹನ ಸಂಚಾರ ಸಮಸ್ಯೆಯೂ ಗಮನಕ್ಕೆ ಬಂದಿದೆ. ವುಂಗಳವಾರದಿಂದ ಕೆಲವೊಂದು ಮಾರ್ಪಾಡು ಮಾಡಿ, ವಾಹನ ಸವಾರರಿಗೆ ಸ್ವಲ್ಪ ಅನುಕೂಲ ಮಾಡಲಾಗುವುದು. - ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ನಗರ ದಕ್ಷಿಣ