ಜಿಲ್ಲೆ

ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ

Dakshina Kannada

ಮಂಗಳೂರು: ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 44 ದಿನದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನಿಂದ ಝೀರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್ ಮೂಲಕ ಗುರುವಾರ ಬೆಂಗಳೂರಿಗೆ ಕರೆದೊಯ್ಯಲಾಯಿತು. ಒಟ್ಟು 4.20 ಗಂಟೆಯಲ್ಲಿ (350 ಕಿ.ಮೀ.) ಮಗುವನ್ನು ಸುರಕ್ಷಿತವಾಗಿ ಬೆಂಗಳೂರು ತಲುಪಿಸಲಾಯಿತು.

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ವೈದ್ಯರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಮಧ್ಯಾಹ್ನ 12.00ಕ್ಕೆ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಹೊರಟ ಐಸಿಯು ಆಂಬ್ಯುಲೆನ್ಸ್ ಬಿ.ಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಝೀರೋ ಟ್ರಾಫಿಕ್‌ನಲ್ಲಿ 4.20ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿದೆ. ಅಲ್ಲಿ ವೈದ್ಯರು ಮಗುವಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರು ತನಕ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲ್ಲಿನ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಸಾರ್ವಜನಿಕರು ಕೂಡ ದಾರಿ ಬಿಟ್ಟು ಕೊಟ್ಟು ಕ್ಷಿಪ್ರಗತಿಯಲ್ಲಿ ಬೆಂಗಳೂರಿಗೆ ತಲುಪುವಲ್ಲಿ ಸಹಕಾರ ನೀಡಿದ್ದರು. ಎಲ್ಲಿಯೂ ತೊಂದರೆಯಾಗಿಲ್ಲ ಎಂದು ಆಂಬುಲೆನ್ಸ್ ಚಾಲಕ ಹನೀಫ್ ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಕುಟುಂಬವೊಂದರ ಮಗುವಿಗೆ ಹೃದಯದಲ್ಲಿ ತೊಂದರೆ ಇದ್ದು, ಶಸ್ತ್ರಚಿಕಿತ್ಸೆ ಅನಿವಾರ್ಯ. ಉನ್ನತ ಸೌಲಭ್ಯವಿ ರುವ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದೆವು. ಕುಟುಂಬದವರೇ ಆಂಬ್ಯುಲೆನ್ಸ್ ವ್ಯವಸ್ಥೆ, ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಂಡು ಮಗುವನ್ನು ಕರೆದೊಯ್ದಿದ್ದಾರೆ. ಜಯದೇವ ಆಸ್ಪತ್ರೆಗೆ ಮಾಹಿತಿ ನೀಡಿದ್ದೇವೆ. - ಡಾ.ಶ್ರೀಧರ್, ಮಕ್ಕಳ ತಜ್ಞ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರ