ಜಿಲ್ಲೆ

8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಮರಣದಂಡನೆ

ಮಂಗಳೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿರುವೈಲು ಗ್ರಾಮದ ಪರಾರಿ ಎಂಬಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು, ಕೊಲೆ ಮಾಡಿದ ಮೂವರು ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಮಧ್ಯಪ್ರದೇಶದ ಜಯ್‌ಬನ್ ಆಧಿವಾಸಿ ಯಾನೆ ಜಯಸಿಂಗ್ ಮುಖೇಶ್ ಸಿಂಗ್ ಮನೀಶ್ ತಿರ್ಕಿ (21), ಮುಖೇಶ್ ಸಿಂಗ್ (20), ಜಾರ್ಖಂಡ್‌ನ ರಾಂಚಿಯ ಮನೀಷ್ ತಿರ್ಕಿ (33) ಮರಣದಂಡನೆಗೊಳಗಾದವರು.

2021 ನವೆಂಬರ್ 21ರಂದು ಇಲ್ಲಿನ ಟೈಲ್ಸ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿತ್ತು. ಅಂದು ಭಾನುವಾರ ರಜಾದಿನವಾದ ಕಾರಣ ಕಾರ್ಮಿಕರು ಇಲ್ಲದೇ ಇದ್ದಾಗ, ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಕೃತ್ಯ ಎಸಗಿದ್ದರು. ಈ ಸಂದರ್ಭ ಬಾಲಕಿ ಕೂಗಿಕೊಂಡಾಗ ಕತ್ತು ಹಿಸುಕಿ ಕೊಲೆ ಮಾಡಿದ್ದರು.

ಅಂದಿನ ಗ್ರಾಮಾಂತರ ಇನ್‌ಸ್ಪೆಕ್ಟರ್ ಜಾನ್ಸನ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 30 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿದೆ. 74 ದಾಖಲೆಗಳನ್ನು ಗುರುತಿಸಲಾಗಿದೆ. ನ್ಯಾಯಾಧೀಶ ಮಾನು ಕೆ.ಎಸ್. ಅವರು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ವೆಂಕಟರಮಣ ಸ್ವಾಮಿ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕ ಕೆ.ವಿಶ್ವನಾಥ ಬಾಯರಿ ಅವರು ವಾದಿಸಿದ್ದರು. ಮಂಗಳೂರು ಫೋಕ್ಸೋ ನ್ಯಾಯಾಲಯದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿರುವುದು ಇದೇ ಮೊದಲು.