ಜಿಲ್ಲೆ

ಬಿಸಿಲ ಧಗೆ ಎಳನೀರಿಗೆ ಭಾರಿ ಡಿಮಾಂಡ್ ಮಂಗಳೂರು ನಗರವೊಂದರಲ್ಲೇ 35 ಸಾವಿರ ಮಾರಾಟ

ಹರೀಶ ಎಂ.

ಮಂಗಳೂರು: ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ವಾತಾವರಣದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಜನ ಹೊರಗೆ ಬರಲು ಕಷ್ಟ ಪಡುತ್ತಿದ್ದಾರೆ. ಈ ನಡುವೆ ನೈಸರ್ಗಿಕ ಆರೋಗ್ಯಕಾರಿ ಪಾನೀಯ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮಂಗಳೂರು ನಗರವೊಂದರಲ್ಲೇ ದಿನವೊಂದಕ್ಕೆ 30ರಿಂದ 35 ಸಾವಿರ ಎಳನೀರು ಮಾರಾಟವಾಗುತ್ತಿದೆ.


ಮಂಗಳೂರಿಗೆ ತಮಿಳುನಾಡಿನಿಂದ ಎಳನೀರು ಪೂರೈಕೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾದರೆ ಬೆಲೆ ದಿಢೀರನೆ ಏರಿಕೆಯಾಗುತ್ತದೆ. ಸರಾಸರಿ 40ರಿಂದ 45 ರೂ. ದರದಲ್ಲಿ ಮಾರಾಟವಾಗುತ್ತಿದೆ. ಮಂಗಳೂರು ನಗರದಲ್ಲಿ 300ಕ್ಕಿಂತಲೂ ಅಧಿಕ ಅಂಗಡಿಗಳಲ್ಲಿ ಸಿಯಾಳ ಮಾರಾಟವಾಗುತ್ತಿದೆ. ಹಲವು ಮಂದಿ ಸಿಯಾಳ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದಾರೆ. ಜತೆಗೆ ಕಲ್ಲಂಗಡಿ ಹಣ್ಣಿಗೂ ವ್ಯಾಪಕ ಬೇಡಿಕೆ ಇದೆ. ಅಂಗಡಿಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ರಾಶಿ ಹಾಖಿ ರಖಂ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.


ಎಳನೀರು ಜತೆಗೆ ಕಬ್ಬು ಹಾಲು ಮತ್ತು ಹಣ್ಣಿನ ಜ್ಯೂಸ್‌ಗಳಿಗೂ ಬೇಡಿಕೆ ಇದೆ. ಕೆಲವು ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಸೇವನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಉರಿ ಬಿಸಿಲಿನ ಪರಿಣಾಮ ಆರೋಗ್ಯ ಹದಗೆಡುತ್ತಿದ್ದು, ಆದಷ್ಟು ಸ್ಥಳೀಯ ಆರೋಗ್ಯಕಾರಿ ಪಾನೀಯಗಳಿಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.


ವಾಣಿಜ್ಯ ಸಮುಚ್ಛಯಗಳಲ್ಲೂ ಮಾರಾಟ: ಹಿಂದೆ ಅಲ್ಲಲ್ಲಿ ರಸ್ತೆ ಬದಿ ಹಾಗೂ ಕೆಲವು ಅಂಗಡಿಗಳಲ್ಲಿ ಮಾತ್ರ ಎಳನೀರು ಮಾರಾಟ ಮಾಡಲಾಗುತ್ತಿತು. ಇತ್ತೀಚಿನ ದಿನಗಳಲ್ಲಿ ಹಲವು ವಾಣಿಜ್ಯ ಸಮುಚ್ಛಯ (ಮಾಲ್)ಗಳಲ್ಲೂ ಎಳನೀರು ಮಾರಾಟ ಮಾಡಲಾಗುತ್ತಿದೆ. ಒಂದೊಮ್ಮೆ ಯುವ ಜನತೆ ವಿದೇಶಿ ಕಂಪೆನಿಗಳ ಪಾನೀಯದತ್ತ ಆಕರ್ಷಿತರಾಗಿದ್ದರು. ಆದರೆ ಇತ್ತೀಚೆಗೆ ಎಳನೀರು ಸೇವನೆ ಮಾಡುತ್ತಿರುವುದು ಹೆಚ್ಚಾಗಿದೆ.


ಹೊಸ ಸಲಕರಣೆ: ಎಳನೀರು ಹಿಂದೆ ಕತ್ತಿಯಲ್ಲಿ ಕೆತ್ತಿ ಕೊಡುತ್ತಿದ್ದರು. ಈಗ ಹೆಚ್ಚು ಶ್ರಮವಿಲ್ಲದೆ ಕೆತ್ತುವ ಸಾಧನೆ ಬಳಕೆಯಾಗುತ್ತಿದೆ. ಕೆಲವು ಕಡೆ ವಿದ್ಯುತ್ ಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ನೀರು ಕುಡಿದ ಬಳಿಕ ಅದನ್ನು ಯಂತ್ರದ ಮೂಲಕ ಸುಲಭದಲ್ಲಿ ಭಾಗ ಮಾಡಲು ಸಾಧ್ಯವಾಗುತ್ತಿದೆ. ಹೆಚ್ಚು ಶ್ರಮವಿಲ್ಲದೆ, ಬಹು ಬೇಗ ಈ ಸಾಧನಗಳ ಮೂಲಕ ಎಳನೀರು ಕೆತ್ತಿ ಕೊಡಲು ಅವಕಾಶವಾಗಿದೆ.


ಎಳನೀರು ಸೇವನೆಯ ಲಾಭ: ಎಳನೀರು ನಿರ್ಜಲೀಕರಣದ ಅಪಾಯದಿಂದ ರಕ್ಷಣೆ ನೀಡುತ್ತದೆ. ಇದರಲ್ಲಿ ಯಾವುದೇ ರಾಸಾಯನಿಕ ಮಿಶ್ರಣಗಳು ಇರುವುದಿಲ್ಲ. ಊಟದ ಬದಲು ಎಳನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ನಂಜು, ಹುಣ್ಣು ಅಥವಾ ಅಜೀರ್ಣತೆ ಬಾಧೆಗೆ ಮುಕ್ತಿ ಸಿಗುತ್ತದೆ. ವಿಟಮಿನ್, ಮಿನರಲ್ ಮತ್ತು ಎಲೆಕ್ಟ್ರೋಲೈಟ್ಸ್ ಹೆಚ್ಚಾಗಿರುವುದರಿಂದ ಬಿರು ಬಿಸಿಲಿನಿಂದ ಬೆವರಿನ ಮೂಲಕ ಉಂಟಾಗುವ ದಣಿವನ್ನು ನಿವಾರಿಸಿ ಜೀವಕೋಶಗಳಿಗೆ ಹೊಸತನ ನೀಡುತ್ತದೆ. ದೇಹದ ಎಲ್ಲಾ ಅಂಗಾಂಗಳಿಗೆ ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ. ಪೊಟಾಷಿಯಂ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಕಿಡ್ನಿಯ ಆರೋಗ್ಯ ಕಾಪಾಡುತ್ತದೆ. ಫ್ಯಾಟ್ ಇಲ್ಲದಿರುವುದರಿಂದ ಹಾಗೂ ಕಡಿಮೆ ಕ್ಯಾಲೊರಿ ಇರುವುದರಿಂದ ಹೆಚ್ಚುವರಿ ತೂಕ ಇಳಿಸಲು ಸಹಕಾರಿ ಎಂದು ವೈದ್ಯ ಡಾ.ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಎಳನೀರಿಗೆ ಉತ್ತಮ ಬೇಡಿಕೆ ಇದೆ. ದಿನವೊಂದಕ್ಕೆ 150ರಷ್ಟು ಎಳನೀರು ಖಾಲಿಯಾಗುತ್ತದೆ. ಬೇಸಿಗೆ ಕಾಲದಲ್ಲಿ ಬಾಗಲಕೋಟೆಯಿಂದ ಬಂದು ವ್ಯಾಪಾರ ಮಾಡಿ ಮಳೆಗಾಲದಲ್ಲಿ ಊರಿಗೆ ಮರಳುತ್ತೇನೆ. ಜೀವನ ನಡೆಸುವಷ್ಟು ಆದಾಯ ಬರುತ್ತಿದೆ.
ಹನುಮಂತಪ್ಪ
ಎಳನೀರು ವ್ಯಾಪಾರಿ