ಜಿಲ್ಲೆ

ಸುರತ್ಕಲ್ ದೀಪಾವಳಿ ಸಂಭ್ರಮ ಭಜನೆ ಭಕ್ತಿ, ಶಕ್ತಿಯ ಸಂಕೇತ ಪಿ.ಎಸ್ ಪ್ರಕಾಶ್ ಅಭಿಮತ

ಮಂಗಳೂರು: ಕಲಿಯುಗದಲ್ಲಿ ಭಜನೆಯೇ ದೇವರನ್ನು ಒಲಿಸುವ ಶ್ರೇಷ್ಠ ಧಾರ್ಮಿಕ ಶಕ್ತಿಯಾಗಿದೆ ಎಂದು ಆರ್‌ಎಸ್‌ಎಸ್ ಸಹ ಕಾರ್ಯವಾಹಕ ಪಿ.ಎಸ್. ಪ್ರಕಾಶ್ ಹೇಳಿದರು.

ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಸಾರಥ್ಯದಲ್ಲಿ ಕರಾವಳಿ ಸೇವಾ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆದ ದೀಪಾವಳಿ ಸಂಭ್ರಮ 2024 ರ ಅಂಗವಾಗಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ, ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಹಾಗೂ ಆಹಾರ ಮೇಳಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಭಜನೆಯ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದಾರೆ. ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಕೀಳು ಹೇಳಿಕೆಗೆ ಯಾರು ಬೆದರುವ ಅಗತ್ಯವಿಲ್ಲ. ಭಜನೆ ಭಕ್ತಿಯ ಮಾರ್ಗ. ಒಟ್ಟಾಗಿ ಭಜನೆ ಮಾಡಿದರೆ ಅಲ್ಲಿ ಭಕ್ತಿ ಮತ್ತು ಶಕ್ತಿ ಹೆಚ್ಚುತ್ತದೆ. ಹೀಗಾಗಿ ಇಂತಹ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಲಿ ಎಂದರು.

ವಕ್ಫ್ ಲ್ಯಾಂಡ್ ಜಿಹಾದ್ ಮೂಲಕ ಭೂಮಿ ಕಬಳಿಸುವ ಕಾರ್ಯ ಮಾಡುತ್ತಿದೆ. ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿದೆ. ಮಠ, ಮಂದಿರ, ದೇವಸ್ಥಾನದ ಜಾಗವನ್ನೂ ಕಬಳಿಸುತ್ತಿದೆ. ಇದನ್ನೆಲ್ಲಾ ಮೆಟ್ಟಿ ನಿಲ್ಲಲು ಭಜನೆಯ ಮೂಲಕ ಶಕ್ತಿ, ಭಕ್ತಿಯ ಮೂಲಕ ಸಾಧ್ಯವಿದೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ನಮ್ಮ ನಂಬಿಕೆ, ಸಂಪ್ರದಾಯಕ್ಕೆ ಚ್ಯುತಿ ತರುವ ಕೆಲಸವಾಗುತ್ತಿದೆ. ಇಂತಹ ಹೇಳಿಕೆ ಬಂದಾಗ ಹಿಂದೂ ಸಮಾಜ ಎಚ್ಚೆತ್ತು ತಕ್ಕ ಪ್ರತ್ಯುತ್ತರ ಕೊಡುತ್ತದೆ. ಇದಕ್ಕೆ ಉತ್ತರವಾಗಿ ಸಂಪ್ರದಾಯವನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.

ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಭಾ. ಜ. ಪ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಕರಾವಳಿ ಸೇವಾ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಭರತ್ ರಾಜ್ ಕಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.

ತುಳು ಲಿಪಿ ಕಲಿಕೆ , ತುಳುನಾಡಿನ ಸಾಂಪ್ರದಾಯಿಕ ಜೀವನ ಶೈಲಿ ಬಿಂಬಿಸುವ ಪರಿಕರಗಳ ಪ್ರದರ್ಶನ ಆಯೋಜಿಸಲಾಗಿತ್ತು.