ಜಿಲ್ಲೆ

ಮಂಗಳೂರು ಸಬ್‌ಜೈಲ್ ಮೇಲೆ ಪೊಲೀಸ್ ದಾಳಿ 25 ಮೊಬೈಲ್, ಬ್ಲೂಟುತ್, ಪೆನ್‌ಡ್ರೈವ್, ಗಾಂಜಾ ಪತ್ತೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಮಂಗಳೂರು ಸಬ್ ಜೈಲಿಗೆ ಗುರುವಾರ ಬೆಳಗ್ಗಿನ ಜಾವ ಪೊಲೀಸರು ದಾಳಿ ನಡೆಸಿದ್ದು ಕೈದಿಗಳು ಬಳಸುತ್ತಿದ್ದ ಮೊಬೈಲ್ ಫೋನ್, ಸಿಗರೇಟ್ ಪ್ಯಾಕ್, ಚಾರ್ಜರ್ ಗಳನ್ನು ವಶಕ್ಕೆ ಪಡೆದಿದ್ದಾರೆ.


ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಇಬ್ಬರು ಡಿಸಿಪಿ, ಮೂರು ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿ ಒಟ್ಟು 150 ಪೊಲೀಸ್ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೈಲಿನ ವಿವಿಧ ಸೆಲ್ ಗಳನ್ನು ತಪಾಸಣೆ ನಡೆಸುವುದಕ್ಕಾಗಿ ಬೇರೆ ಬೇರೆ ತಂಡಗಳನ್ನು ರಚಿಸಲಾಗಿತ್ತು.


ದಾಳಿ ಸಂದರ್ಭದಲ್ಲಿ 25 ಮೊಬೈಲ್ ಫೋನ್, ಒಂದು ಬ್ಲೂಟುತ್ ಉಪಕರಣ, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಮೊಬೈಲ್ ಚಾರ್ಜರ್, ಸಿಗರೇಟ್ ಪ್ಯಾಕ್, ಮೂರು ಕೇಬಲ್, ಸ್ವಲ್ಪ ಪ್ರಮಾಣದಲ್ಲಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ. ಜೈಲಿನ ಒಳಗಿದ್ದುಕೊಂಡೇ ಕೈದಿಗಳು ಹಫ್ತಾ ವಸೂಲಿ, ಹಣಕ್ಕಾಗಿ ಡಿಮ್ಯಾಂಡ್ ಇಡುವುದು, ಬೆದರಿಕೆ ಹಾಕುವಂತಹ ಕೃತ್ಯ ನಡೆಸುತ್ತಾರೆ. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ.


ಭದ್ರತೆ ಇದ್ದರೂ ಸಾಗಾಟ: ಜೈಲ್‌ಗೆ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ತಪಾಸಣೆಕಾರರು, ನಾಲ್ಕು ಗೇಟುಗಳು, ಸ್ಕಾೃನರ್, ಸಿಸಿ ಕ್ಯಾಮೆರಾ ಇದ್ದರೂ ನಿಷೇಧಿತ ಸೊತ್ತುಗಳು ಜೈಲ್ ಒಳಗೆ ಅವ್ಯಾಹತವಾಗಿ ಸಾಗಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ. ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಬರುವವರನ್ನು ಹಾಗೂ ಅವರು ತರುವ ಸೊತ್ತುಗಳನ್ನು ತಪಾಸಣೆ ನಡೆಸಿಯೇ ಒಳ ಬಿಡುತ್ತಿದ್ದರೂ, ಯಾವ ರೀತಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನಿಷೇಧಿತ ಸೊತ್ತುಗಳು ಜೈಲ್‌ನ ಒಳಗೆ ಪ್ರವೇಶಿಸುತ್ತದೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.


ಜೈಲ್‌ಗೆ ಮೊಬೈಲ್ ಜಾಮರ್ ಅಳವಡಿಸಿದ್ದರೂ ಜೈಲ್‌ನೊಳಗೆ ವಿಚಾರಣಾಧೀನ ಕೈದಿಗಳಿಗೆ ಮೊಬೈಲ್ ಬಳಕೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಜೈಲ್‌ನೊಳಗೆ ಕುಳಿತುಕೊಂಡೇ ಡೀಲ್ ಮಾಡುವ ಕೈದಿಗಳು ಮಂಗಳೂರು ಜೈಲ್‌ನಲ್ಲಿದ್ದಾರೆ. ಕೆಲವು ಪಾತಕಿಗಳಿಗೆ ಜೈಲ್ ಸ್ವರ್ಗದಂತೆ. ಹೊರಗೆ ಬಂದರೆ ಅವರಿಗೆ ಜೀವ ಭಯವಿರುತ್ತದೆ. ಆದರೆ ಜೈಲ್‌ನೊಳಗೆ ಇದ್ದಷ್ಟೂ ಅವರು ಸೇಫ್ ಆಗಿರುತ್ತಾರೆ. ಅದಕ್ಕಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಲು ಬಯಸುವುದಿಲ್ಲ ಎನ್ನುವುದು ಕೆಲವರ ವಾದ.


ಪೊಲೀಸರ ಮೇಲೆಯೇ ಹಲ್ಲೆ ನಡೆದಿತ್ತು
2014 ಜೂನ್ 8ರಂದು ಸೀಮಿತ ಸಂಖ್ಯೆಯ ಪೊಲೀಸರು ಜೈಲ್‌ನ ಸೆಲ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ವಿಚಾರಣಾಧೀನ ಕೈದಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಎಸಿಪಿ ತಿಲಕ್‌ಚಂದ್ರ ಸೇರಿದಂತೆ ಹಲವು ಮಂದಿ ಪೊಲೀಸರು ಗಾಯಗೊಂಡಿದ್ದರು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಪೊಲೀಸ್ ಬಲ ಕ್ರೋಢೀಕರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಆದರೂ ಕೆಲವು ಕೈದಿಗಳು ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಜೈಲ್‌ನಲ್ಲಿ 2015 ನ.2 ರಂದು ಮಾಡೂರು ಇಸುಬು ಹಾಗೂ ಈತನ ಸಹಚರ ಗಣೇಶ್ ಶೆಟ್ಟಿ ಕೊಲೆಯಾಗಿತ್ತು. ಇವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು. ಮಾರಕಾಯುಧ ಜೈಲು ಸೇರುವುದು ಇಂದು ನಿನ್ನೆಯ ವಿಷಯವಲ್ಲ. ಡಬಲ್ ಕೊಲೆಯಾದ ನಿದರ್ಶನವಿದೆ.