ಜಿಲ್ಲೆ

ಸಮಗ್ರ ಸಾಮಾಜಿಕ - ಆರ್ಥಿಕ ಸಮೀಕ್ಷಾ ಸಂಶೋಧನಾ ವರದಿ ಪುಸ್ತಕ ಬಿಡುಗಡೆ

ಹರೀಶ ಎಂ.

ಮಂಗಳೂರು: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ರಾಜ್ಯಮಟ್ಟದ ಸಮಗ್ರ ಸಾಮಾಜಿಕ - ಆರ್ಥಿಕ ಸಮೀಕ್ಷಾ ಸಂಶೋಧನಾ ವರದಿ ಪುಸ್ತಕವನ್ನು ಬಂಟ್ವಾಳದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ್ ಶೆಣೈ ಅವರು ಪುಸ್ತಕವನ್ನು ಅನಾವರಣಗೊಳಿಸಿದರು. ಪ್ರತಿ ವ್ಯಕ್ತಿಯು ತಮ್ಮ ಮಾತೃಭಾಷೆ, ಸಂಸ್ಕೃತಿ , ಕಲೆ ಹಾಗೂ ಸಂಸ್ಕಾರವನ್ನು ಎಂದಿಗೂ ಕಡೆಗಣಿಸಬಾರದು. ಈ ಸಮಗ್ರ ವರದಿಯು ಸಮಾಜದ ಅಭಿವೃದ್ಧಿಗೆ ಅಡಿಪಾಯ ಹಾಗೂ ಮುಂದಿನ ಯೋಜನೆಗಳಿಗೆ ಪೂರಕ ಎಂದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ್ ನಾಯಕ್ ಮೈರಾ ಮಾತನಾಡಿ,ಯಾವುದೇ ಸಮಾಜದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಾಗ ವಾಸ್ತವ ಸ್ಥಿತಿಗತಿಗಳನ್ನು ನಿಖರ ಅಂಕಿ ಅಂಶಗಳೊಂದಿಗೆ ತಿಳಿಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯು ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವ್ಯಾರೀಸ್ ಮಾತನಾಡಿ, ಭಾಷೆಯನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಬಳಸಿ ನಾವು ಕೊಂಕಣಿ ಮಾತೆಯ ಸೇವೆ ಸಲ್ಲಿಸಬೇಕು ಎಂದರು.

ಡಾ.ವೈ. ರವೀಂದ್ರನಾಥ್ ರಾವ್ ಮಾತನಾಡಿ, ಈ ವರದಿಯ ರಚನೆಯಲ್ಲಿ ಸಮಾಜಭಾಂದವರ ಸ್ವಯಂ ಪ್ರೇರಿತ ಸೇವೆ, ಬದ್ಧತೆ ಹಾಗೂ ಕಾರ್ಯವೈಖರಿಯನ್ನು ಸ್ಮರಿಸಿದರು. ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಮುತ್ಸದ್ದಿ ಗಣಪತಿ ಶೆಣೈ ಡೆಚ್ಚಾರು ಅವರನ್ನು ಸಮಾಜ ಸೇವಾ ರತ್ನ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಶಿಕ್ಷಕ ರವೀಂಧ್ರ ನಾಯಕ್ ಕಿನ್ನಾಜೆ ಪ್ರಶಸ್ತಿಯ ಮಹತ್ವವನ್ನು ವಿವರಿಸಿದರು.

ಸುಚಿತ್ರಾ ರಮೇಶ ನಾಯಕ್ , ಸಂಜೀವ ಪಾಟೀಲ್, ವಿಜಯ ಶೆಣೈ , ಶ್ರೀನಿವಾಸ ಕೂಡಿಬೈಲು, ಕಸ್ತೂರಿ ಮೋಹನ ಪ್ರಭು, ಸುಶೀಲಾ ಗಣಪತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ವಿಜಯಲಕ್ಷ್ಮೀ ನಾಯಕ್ ಇವರು ಸ್ವಾಗತಿಸಿದರು. ಸತೀಶ್ ಪ್ರಭು ಮಣಿಯ ವಂದಿಸಿದರು. ದಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.