ಜಿಲ್ಲೆ

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ನಿಯಮ ಉಲ್ಲಂಘಿಸಿದರೆ ಕ್ರಮ ಮೇಯರ್ ಎಚ್ಚರಿಕೆ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಸ್ಟೇಟ್‌ಬ್ಯಾಂಕ್ ಇಂದಿರಾ ಕ್ಯಾಂಟಿನ್ ಸಮೀಪ ನಿರ್ಮಿಸಲಾದ ವಲಯದಲ್ಲಿ ವ್ಯಾಪಾರ ನಡೆಸಲು ಗುರುತಿನ ಚೀಟಿ ವಿತರಣೆ ಹಾಗೂ ಸ್ಟಾಲ್‌ಗಳ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.


ಮೇಯರ್ ಸುಧಿರ್ ಶೆಟ್ಟಿ ಕಣ್ಣೂರು ಅವರು ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಣೆ ಹಾಗೂ ಚೀಟಿ ಎತ್ತವ ಮೂಲಕ ಸ್ಟಾಲ್ ಹಸ್ತಾಂತರಕ್ಕೆ ಚಾಲನೆ ನೀಡಿದರು.


ಬಳಿಕ ಮಾತನಾಡಿ ಅವರು, ನಿಯಮ ಪಾಲಿಸಿ ಬಂದ ಬೀದಿ ಬದಿ ವ್ಯಾಪಾರಿಗಳಿಗೆ ಜಿಪಿಎಸ್ ಆಧಾರಿತ ಗುರುತಿನ ಚೀಟಿ ವಿತರಿಸುವ ಮೂಲಕ ನಿಯಮ ಉಲ್ಲಂಘನೆಯಾಗದಂತೆಯೂ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಸುರತ್ಕಲ್ ಸೇರಿದಂತೆ ಇತರ ಪ್ರದೇಶಗಳಲ್ಲೂ ವಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.


667 ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸುವ ಕೆಲಸ ಪಟ್ಟಣ ವ್ಯಾಪಾರಸ್ಥರ ಸಮಿತಿಯ ಮೂಲಕ ಈ ಹಿಂದೆಯೇ ನಡೆದಿತ್ತು. ಆದರೆ ಸಮಿತಿ ವಿರೋಧಿಸಿದ ಕಾರಣ ಅವರಿಗೆ ಗುರುತಿನ ಚೀಟಿ ವಿತರಣೆ ವಿಳಂಬವಾಗಿತ್ತು. ಈ ನಡುವೆ ಪಾಲಿಕೆ 18 ನಿಯಮಗಳನ್ನು ಜಾರಿಗೊಳಿಸಿ ಪಾಲಿಸುವಂತೆ ತಿಳಿಸಲಾಗಿದ್ದು, ನಿಯಮ ಪಾಲಿಸುವವರಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಕಾರ್ಯಾಚರಣೆ ವೇಳೆ ವ್ಯಕ್ತವಾದ ವಿರೋಧಕ್ಕೆ ಸ್ಟಾಲ್ ಹಂಚಿಕೆಯ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದೇವೆ. ಆ ಸಂತೃಪ್ತಿ ನಮಗಿದೆ ಎಂದರು.


ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ವ್ಯಾಪಾರ ಆರಂಭಿಸಿದ ಬಳಿಕ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡಬಾರದು. ಪಾಲಿಕೆಯೊಂದಿಗೆ ಸಹಕಾರ ನೀಡಬೇಕು. ಆ ಮೂಲಕ ರಾಜ್ಯಕ್ಕೆ ಮಾದರಿ ಬೀದಿಬದಿ ವ್ಯಾಪಾರಿ ವಲಯವಾಗಬೇಕು ಎಂದರು.


ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆಹಾರ ಕೌಂಟರ್ ನವರು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಯಾರಿಗೂ ಆರೋಗ್ಯಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು. ಇಲಿ, ಹೆಗ್ಗಣ, ಜಿರಳೆ ಬರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ತಮ್ಮ ಹೆಸರಿನ ಅನುಮತಿಯನ್ನು ಬೇರೆಯವರಿಗೆ ನೀಡಿದ್ದಲ್ಲಿ ಪ್ರಮಾಣಪತ್ರ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ ಮೇಯರ್ ಟೈಗರ್ ಕಾರ್ಯಾಚರಣೆ ನಿರಂತರ ಮುಂದುವರೆಯಲಿದೆ ಎಂದರು.


ಉಪಮೇಯರ್ ಸುನಿತಾ, ವಿಪಕ್ಷ ನಾಯಕ ಪ್ರವೀಣ ಚಂದ್ರ ಆಳ್ವ, ಕಮಿಷನರ್ ಆನಂದ್ ಸಿ.ಎಲ್., ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮಿನ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ವಲಯ ಆಯುಕ್ತೆ ರೇಖಾ ಶೆಟ್ಟಿ , ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ರೀಟಾ ನೊರೊನ್ಹಾ, ಹನುಮಂತ ಕಾಮತ್, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮುಸ್ತಾಫ, ಕಾರ್ಯದರ್ಶಿ ಹರೀಶ್ ಕುಮಾರ್ ಉಪಸ್ಥಿತರಿದ್ದರು.