ಜಿಲ್ಲೆ

ಸಿಟಿ ಬಸ್ ಸ್ಟೇಟ್‌ಬ್ಯಾಂಕ್ ತಂಗುದಾಣ ಬದಲಾವಣೆಗೆ ವಿರೋಧ; ಹಳೇ ಪದ್ಧತಿಗೆ ಮರಳಿಸಲು ಗಡುವು ವಿಧಿಸಿದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರ ಪ್ರವೇಶಿಸುವ ಸಿಟಿ ಬಸ್‌ಗಳು ಹಳೇ ಪದ್ಧತಿಯಂತೆ ಹ್ಯಾಮಿಲ್ಟನ್ ವೃತ್ತ ತಿರುಗಿ ರಾವ್ ಆ್ಯಂಡ್ ರಾವ್ ವೃತ್ತದ ಮೂಲಕ ಪ್ರಯಾಣಿಸಲು ವಾರದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಟೇಟ್‌ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಸಿಟಿ ಬಸ್ ನಗರದ ಸ್ಟೇಟ್ ಬ್ಯಾಂಕ್ ಕೊನೆಯ ಬಸ್ ನಿಲ್ದಾಣ ಬದಲಿಯಾದ ಬಳಿಕ ಸ್ಟೇಟ್ ಬ್ಯಾಂಕ್‌ನಲ್ಲಿ ವ್ಯಾಪಾರಿಗಳಿಗೆ ತೀವ್ರ ನಷ್ಟ ಆಗುತ್ತಿರುವ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಇತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು  ತಿಳಿಸಿದರು.
ನಗರ ಸಾರಿಗೆ ನಿಯಮಾವಳಿಯಂತೆ ಸಿಟಿ ಬಸ್‌ಗಳು ನಿಲ್ದಾಣ ಪ್ರವೇಶಿಸುವಂತಿಲ್ಲ. ತಂಗುದಾಣದಲ್ಲಿಯೇ ನಿಂತು ಅಲ್ಲಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಪ್ರಸ್ತುತ ಸಿಟಿ ಬಸ್‌ಗಳು ತಂಗುದಾಣಗೊಳಗೆ ಪ್ರವೇಶಿಸಲು ಅವಕಾಶ ನೀಡಿ ನಿಯಮಾವಳಿ ಉಲ್ಲಂಸಲಾಗಿದೆ ಎಂದವರು ಹೇಳಿದರು.
ಸಂಘದ ಕಾರ್ಯಾಧ್ಯಕ್ಷ, ಪಾಲಿಕೆ ಸದಸ್ಯ ಅಬ್ದುಲ್ ಲತ್ೀ ಕಂದಕ್ ಮಾತನಾಡಿ, ಸಿಟಿ ಬಸ್ ನಿಲುಗಡೆ ಪ್ರದೇಶವನ್ನು ಸರ್ವಿಸ್ ಬಸ್ ತಂಗುದಾಣದೊಳಗೆ ಸ್ಥಳಾಂತರಿಸುವ ವಿಷಯ ಮಹಾನಗರ ಪಾಲಿಕೆ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ತಾತ್ಕಾಲಿಕ ಪ್ರಾಯೋಗಿಕ ನೆಲೆಯ ನೆಪದಲ್ಲಿ ಶಾಶ್ವತ ವರ್ಗಾವಣೆ ನಡೆಸಲಾಗಿದೆ ಎಂದು ಆರೋಪಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಜಯ ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ನವೀನ್ ಡಿ’ಸೋಜಾ, ಹಮೀದ್ ಶಾ ಉಪಸ್ಥಿತರಿದ್ದರು