ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಕರಾವಳಿ ಸನ್ನದ್ಧಗೊಂಡಿದೆ. ಸಂಘ ಸಂಸ್ಥೆಗಳು ಆಯೋಜಿಸುವ ಮೊಸರು ಕುಡಿಕೆಗೆ ಎಲ್ಲೆಡೆ ಸಿದ್ಧತೆ ನಡೆದಿದೆ. ತರಕಾರಿ, ಹೂವಿನ ಮಾರುಕಟ್ಟೆಗಳು ಸಜ್ಜುಗೊಳ್ಳುತ್ತಿವೆ. ಮೊಸರು ಕುಡಿಕೆಗೆ ಸಿದ್ಧತೆ ಜೋರಾಗಿ ನಡೆದಿವೆ.
ಕದ್ರಿ, ಅತ್ತಾವರ, ಉರ್ವಾಸ್ಟೋರ್, ಕಾವೂರು ಮೊದಲಾದ ಕಡೆ ಮೊಸರು ಕುಡಿಕೆಗೆ ಮಡಕೆಗಳನ್ನು ಕಟ್ಟಿ ಅಣಿಗೊಳಿಸುವ ಕಾರ್ಯ ನಡೆಯುತ್ತಿದೆ. ಸಂಘ ಸಂಸ್ಥೆಗಳು ಆಯೋಜಿಸುವ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ಈಗಾಗಲೇ ಕೆಲವು ಕಡೆ ಶನಿವಾರ ನಡೆದಿದ್ದು, ಇನ್ನು ಕೆಲವು ಕಡೆ ಭಾನುವಾರ ನಡೆಯಲಿದೆ. ಕದ್ರಿ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಕಲ್ಕೂರ ಪ್ರತಿಷ್ಠಾನದಿಂದ ನಡೆಯುವ ಸ್ಪರ್ಧೆಗೆ ಸಿದ್ಧತೆ ಅಂತಿಮ ಹಂತದಲ್ಲಿದೆ.
ಹಾಸನ, ಬೆಂಗಳೂರು, ತುಮಕೂರು ಮುಂತಾದ ಕಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅಷ್ಟೊಂದು ಗೌಜಿಯಿಂದ ಆಚರಿಸುತ್ತಿಲ್ಲ. ಹಾಗಾಗಿ ಅಲ್ಲಿನ ಹೂವಿನ ವ್ಯಾಪಾರಿಗಳು ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಹೂವು ಹಿಡಿದುಕೊಂಡು ಕರಾವಳಿಗೆ ಬರುತ್ತಾರೆ. ಈ ವರ್ಷವೂ ಆಗಮಿಸುತ್ತಿದ್ದು, ಭಾನುವಾರ ನಗರದ ಅಲ್ಲಲ್ಲಿ ಹೊರಗಡೆಯಿಂದ ಬಂದ ವ್ಯಾಪಾರಿಗಳು ಹೂವು ಮಾರಾಟ ಮಾಡುತ್ತಾರೆ.
ಮೂಡೆ ದುಬಾರಿ:
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆ ಜನಪ್ರಿಯ. ಸ್ಥಳೀಯ ಮೂಡೆ ವ್ಯಾಪಾರಸ್ಥರು ಮಾರುಕಟ್ಟೆಗೆ ಆಗಮಿಸಿದ್ದಾರೆ. ಕಾರ್‌ಸ್ಟ್ರೀಟ್ ಪರಿಸರದಲ್ಲಿ ಮೂಡೆ ಮಾರಾಟಗಾರರಿದ್ದಾರೆ. ಪ್ರತಿ ವರ್ಷವೂ ಗ್ರಾಹಕರು ಮೂಡೆ ಮುಗಿ ಬಿದ್ದು ಖರೀದಿಸುತ್ತಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮೂಡೆ ದರ ಹೆಚ್ಚುತ್ತಲೇ ಇದೆ. ಈ ವರ್ಷ 100 ರೂಪಾಯಿಗೆ ದೊಡ್ಡ ಗಾತ್ರದ 5 ಹಾಗೂ ಸಣ್ಣ ಗಾತ್ರದ 7 ಮೂಡೆಗಳಷ್ಟೇ ಗ್ರಾಹಕರಿಗೆ ಲಭ್ಯವಾಗಿದೆ. ಮೂಡೆ ತಯಾರಿಸಲು ಕಷ್ಟವಿದೆ. ಅದಕ್ಕೆ ಬೇಕಾದ ಪರಿಕರಗಳು ಸಿಗುತ್ತಿಲ್ಲ. ದೂರದಿಂದ ಕಡಿದು ತರಬೇಕು. ಬಹಳಷ್ಟು ಕಷ್ಟವಿದೆ. ಹಾಗಾಗಿ ದರ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ ಮಾರಾಟಗಾರರು.