ಮಂಗಳೂರು: ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ನಿರ್ಮಾಣ ಕಾಮಗಾರಿಗಳ ಉತ್ಪಾದನಾ ಸಂಸ್ಥೆಯಾದ ಇಟೆಲಿ ಮೂಲದ ಮೀರ್ ಗ್ರೂಪ್ ಜೊತೆ ಮಂಗಳೂರಿನ ಎಸ್‌ಇಝಡ್ ಕಂಪನಿ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತಿಯಲ್ಲಿ ಎಸ್‌ಇಝೆಡ್ ಸಿಇಒ ಸೂರ್ಯನಾರಾಯಣ ಮತ್ತು ಮಿರ್ ಗ್ರೂಪ್ ಸಿಇಒ ರಫೇಲೆ ಮರಾಝೊ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಮೀರ್ ಗ್ರೂಪ್ ಮಂಗಳೂರಿನಲ್ಲಿ 10 ಎಕರೆ ಪ್ರದೇಶದಲ್ಲಿ 1,500 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, 500ರಿಂದ 600 ಮಂದಿಗೆ ಉದ್ಯೋಗ ಅವಕಾಶದ ಸಿಗಲಿದೆ. ಸುಮಾರು ಎರಡು ವರ್ಷದಲ್ಲಿ ಮೀರ್ ಗ್ರೂಪ್‌ನ ಪರಿಸರಸ್ನೇಹಿ ಕೈಗಾರಿಕೆ ಮಂಗಳೂರಲ್ಲಿ ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಈ ಸಂದರ್ಭ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಇದು ಒಂದು ವಿದೇಶಿ ನೇರ ಹೂಡಿಕೆಯಾಗಿದ್ದು ಮೀರ್ ಗ್ರೂಪ್‌ನ ಮುಖ್ಯಸ್ಥರು ಹಾಗೂ ತಂಡದವರು ಶನಿವಾರ ದೆಹಲಿಗೆ ತೆರಳಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ. ಮೊದಲ ಹಂತದಲ್ಲಿ ಅವರು ಎಸ್‌ಇಝಡ್‌ನಲ್ಲಿ 10 ಎಕರೆ ಜಾಗ ಕೇಳಿದ್ದು, ಮುಂದೆ ಹಂತ ಹಂತವಾಗಿ ಉದ್ಯಮ ಇನ್ನಷ್ಟು ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಮುಂದಿನ ಎರಡು ವರ್ಷಗಳಲ್ಲಿ ಕಂಪನಿ ಕಾರ್ಯಾರಂಭಿಸುವ ಸಾಧ್ಯತೆಗಳಿವೆ ಎಂದರು.
ಎಸ್‌ಇಝಡ್ ಸಿಇಒ ಸೂರ್ಯನಾರಾಯಣ ಮಾತನಾಡಿ, ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೂಲಸೌಕರ್ಯ, ಮಂಗಳೂರಿನ ಬಂದರು ಸೌಲಭ್ಯ ಮತ್ತಿತರ ಮಹತ್ವವನ್ನು ಅರಿತುಕೊಂಡಿರುವ ಮೀರ್ ಗ್ರೂಪ್ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿರ್ಮಿಸುವ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಲಿದೆ ಎಂದರು.
ಮೀರ್ ಗ್ರೂಪ್ ಸಿಇಒ ರಫೇಲೆ ಮಾತನಾಡಿ, ಮಂಗಳೂರು ನಮಗೊಂದು ಮುಖ್ಯವಾದ ಸ್ಥಳವಾಗಿದ್ದು, ಇಲ್ಲಿ ನಮ್ಮ ಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ. ಈ ಮೂಲಕ ಮಧ್ಯಪ್ರಾಚ್ಯ, ಆಫ್ರಿಕನ್ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ ಎಂದರು.
ಮೀರ್ ಕಂಪನಿಯ ಕಾನೂನು ಘಟಕ ಮುಖ್ಯಸ್ಥ ಕ್ಲಾಡಿಯೊ, ಚಂದ್ರುಪರ್ವತ್ ರೆಡ್ಡಿ ಇದ್ದರು.