ಜಿಲ್ಲೆ

16-17 ಪಾವಂಜೆಯಲ್ಲಿ ಯಕ್ಷಗಾನ ರಂಗದ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರ 50 ವರ್ಷದ ಯಕ್ಷ ಪಯಣದ ‘ಕಟೀಲು ಕನಕ ಸಂಭ್ರಮ’

ಮಂಗಳೂರು: ತೆಂಕು ಬಡಗು ಯಕ್ಷಗಾನ ರಂಗದ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರ 50 ವರ್ಷದ ಯಕ್ಷ ಪಯಣದ ‘ಕಟೀಲು ಕನಕ ಸಂಭ್ರಮ’ ಕಾರ್ಯಕ್ರಮ ನ.16 ಮತ್ತು 17 ರಂದು ಪಾವಂಜೆಯ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮ ಕಟೀಲ್, ಕಳೆದ 50 ವರ್ಷಗಳಿಂದ ನಾನು ಯಕ್ಷಗಾನ ಕಲಾ ಸೇವೆ ಮಾಡಿಕೊಂಡು ಬಂದಿರುತ್ತೇನೆ. ಹಿರಿಯರಾದ ದಿ. ಡಾ. ನಾರಾಯಣ ಶೆಟ್ಟಿ, ಯಕ್ಷಗಾನ ಖ್ಯಾತ ಅರ್ಥದಾರಿ ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣಾ ವೇದಿಕೆಯೊಂದಿಗೆ ಈ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಯನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ನೆರವೇರಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಭಾಕರ ಜೋಶಿ, ಶಶೀಂದ್ರ ಕುಮಾರ್, ಮಹಾಬಲ ಪೂಜಾರಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬೆಳಗ್ಗೆ 11 ರಿಂದ ಸಾಧಕರಿಗೆ ಗೌರವಾರ್ಪಣೆ, ಯಕ್ಷ ರಾಜ್ಯೋತ್ಸವ ಪ್ರಶಸ್ತಿ ನೆರವೇರಲಿದೆ. ಮಧ್ಯಾಹ್ನ 3 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 6.30 ರಿಂದ ಯುವ ಗಿರ್ಕಿ ಪ್ರವೀಣರಿಂದ ಮಕರಾಕ್ಷ ಕಾಳಗ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಎರಡನೇ ದಿನವಾದ ನ.17 ರಂದು ಬೆಳಗ್ಗೆ 10 ಗಂಟೆಗೆ ನೃತ್ಯ ವೈಭವ, ಪರಂಪರೆ ಸೀವೇಷ ಜರುಗಲಿದೆ. ಬಳಿಕ ಗೌರವಾರ್ಪಣೆ, ಬೆಳಗ್ಗೆ 11ಕ್ಕೆ ಯಕ್ಷ ರಾಜ್ಯೋತ್ಸವ ಪ್ರಶಸ್ತಿ, ಮಧ್ಯಾಹ್ನ 2.30 ರಿಂದ ಆಳ್ವಾಸ್ ಧೀಂಕಿಟ ವಿದ್ಯಾರ್ಥಿಗಳಿಂದ ನರಶಾರ್ದೂಲ ಯಕ್ಷಗಾನ, ಸಂಜೆ 3.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30 ರಿಂದ ಬಡಗುತಿಟ್ಟು ಯಕ್ಷಗಾನ ಸುಂದೋಪ ಸುಂದ ಕಾಳಗಮ ರಾತ್ರಿ 8 ರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಜರುಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹರೀಶ್ ಕೆ. ಪೂಜಾರಿ, ಜಗದೀಶ್ಚಂದ್ರ, ಸತೀಶ್ ಅಡಪ ಸಂಕಬೈಲು ಇದ್ದರು.