ಮಂಗಳೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ 1992-97 ಹಾಗೂ 1994-1999 ನೇ ಸಾಲಿನ ಹಳೇ ವಿದ್ಯಾರ್ಥಿಗಳ ಪುನರ್‌ಮಿಲನ ಕಾರ‌್ಯಕ್ರಮ ನಡೆಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ‌್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಪ್ರೊ. ಅರಳ ರಾಜೇಂದ್ರ ಶೆಟ್ಟಿಯವರನ್ನು ಹಳೇ ವಿದ್ಯಾರ್ಥಿಗಳ ವತಿಯಿಂದ ಗೌರವಿಸಲಾಯಿತು. ಪ್ರಸ್ತುತ ಕಾನೂನು ಪದವಿ ಓದುತ್ತಿರುವ ಅರ್ಹ 7 ಮಂದಿ ವಿದ್ಯಾರ್ಥಿಗಳಿಗೆ ಇದೇ ಸಂಧರ್ಭದಲ್ಲಿ ತಲಾ 5,000 ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರನ್ನು ಕೂಡಾ ಇದೇ ಸಂಧರ್ಭದಲ್ಲಿ ಗೌರವಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಸಂಘ ಆಯೋಜಿಸಿದ ಈ ಕಾರ‌್ಯಕ್ರಮದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿದರು. ಪ್ರಸ್ತುತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ‌್ಯಕ್ರಮವೂ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಕಾರ‌್ಯಕ್ರಮದ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿ ಸಂಘದ ಮುಖ್ಯ ಕಾರ‌್ಯದರ್ಶಿ ಸತ್ಯಾತ್ಮ ಭಟ್ ನಿರೂಪಿಸಿದರು.