ಜಿಲ್ಲೆ

ಮೊಳಹಳ್ಳಿ ಶಿವರಾವ್ ಹೆಸರು ಚಿರಸ್ಥಾಯಿ 144ನೇ ಜನ್ಮ ದಿನಾಚರಣೆಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು: ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಅವರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೇಶಕ್ಕೆ ಮಾದರಿ. ಅವರ ಹೆಸರು ಚಿರಸ್ಥಾಯಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.


ಕೊಡಿಯಾಲಬೈಲ್‌ನ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಭಾನುವಾರ ದಿ.ಮೊಳಹಳ್ಳಿ ಅವರ 144ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ದೀಪ ಬೆಳಗಿಸಿ ಮಾತನಾಡಿದರು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸಲು ಮೊಳಹಳ್ಳಿ ಶಿವರಾಯರ ದೂರದರ್ಶಿತ್ವ ಕಾರಣ. ಅವರು ತಮ್ಮ ಹುಟ್ಟೂರಿನಲ್ಲಿ ಸ್ಥಾಪನೆ ಮಾಡಿದ ಸಹಕಾರಿ ಕ್ಷೇತ್ರ ಇಂದು ರಾಜ್ಯದಗಲಕ್ಕೆ ವಿಸ್ತರಿಸಿದೆ. ವಕೀಲರಾಗಿದ್ದ ಅವರು ಸಹಕಾರ ಕ್ಷೇತ್ರದಲ್ಲಿ ಆಸಕ್ತರಾಗಿ ಆ ಕಾಲದಲ್ಲಿ ಎತ್ತಿನ ಗಾಡಿಯಲ್ಲಿ ಸುತ್ತಾಡಿ ಸಹಕಾರಿ ಕ್ಷೇತ್ರವನ್ನು ಎಲ್ಲೆಡೆ ವಿಸ್ತರಿಸಿದ್ದಾರೆ ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಮೊಳಹಳ್ಳಿ ಶಿವರಾಯರ ಆದರ್ಶ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರದ ಹಿರಿಯರಾದ ಮೊಳಹಳ್ಳಿಯವರನ್ನು ನಾವು ನಿತ್ಯ ಸ್ಮರಿಸಬೇಕಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಬ್ಯಾಂಕ್ ಇನ್ನಷ್ಟು ಸಾಧನೆಯ ಪಥದಲ್ಲಿ ಮುನ್ನಡೆಯಲಿ ಎಂದರು.


ದ.ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಮೊಳಹಳ್ಳಿ ಶಿವರಾಯರು ಹಾಕಿದ ಭದ್ರವಾದ ಅಡಿಪಾಯದಿಂದ ಸಹಕಾರಿ ಕ್ಷೇತ್ರ ಇಂದು ಬೆಳಗುತ್ತಿದೆ. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಜನಮನ್ನಣೆ ಪಡೆದಿದೆ. ಮುಂದೆಯೂ ಸಹಕಾರಿ ಕ್ಷೇತ್ರ ಯಶಸ್ಸಿನ ಪಥದಲ್ಲಿ ನಡೆಯಲಿ ಎಂದರು.


ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಕೆ. ಜೈರಾಜ್ ಬಿ.ರೈ, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಜನತಾ ಬಜಾರ್ ಅಧ್ಯಕ್ಷ ಪುರುಷೋತ್ತಮ ಭಟ್, ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಆಚಾರ್, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್,ಯೂನಿಯನ್ ಕಾರ್ಯದರ್ಶಿ ಎಸ್.ವಿ.ಹಿರೇಮಠ, ನಿರ್ದೇಶಕಿ ಕೆ.ಸಾವಿತ್ರಿ ರೈ ಉಪಸ್ಥಿತರಿದ್ದರು.