ಮಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪೂರಕವಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಇರಿಸಲಾಗಿದೆ. ಠಾಣೆಗೆ ಆಗಮಿಸುವವರು ಅಲ್ಲಿನ ಕುಂದುಕೊರತೆ, ಪೊಲೀಸರ ನಡವಳಿಕೆ ಬಗ್ಗೆ ಕ್ಯೂಆರ್ ಕೋಡ್‌ನ್ನು ಸ್ಕಾೃನ್ ಮಾಡುವ ಮೂಲಕ ಅಭಿಪ್ರಾಯ ದಾಖಲಿಸಬಹುದು ಎಂದು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದರು.
ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಭಾನುವಾರ ದಲಿತ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜ ವಿರೋಧಿ ಕೃತ್ಯಕ್ಕೆ ಕಡಿವಾಣ ಹಾಕಲು ನಗರ ಪ್ರದೇಶದಲ್ಲಿರುವ ಎಸ್‌ಸಿ ಎಸ್‌ಟಿ ಕಾಲನಿಗಳಲ್ಲಿ ವಾರಾಂತ್ಯದಲ್ಲಿ ಕುಂದುಕೊರತೆ ಸಭೆ ನಡೆಸಲಾಗುವುದು ಎಂದು ಕಾನೂನು ಹಾಗೂ ಅಪರಾಧ ಪತ್ತೆ ವಿಭಾಗದ ಡಿಸಿಪಿ ಅಂಶು ಕುಮಾರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಎಸ್‌ಸಿ ಸ್‌ಟಿ ಕುಂದು ಕೊರತೆ ಸಭೆ ನಡೆಯುತ್ತಿಲ್ಲ, ಈ ಬಗ್ಗೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂಬ ದಲಿತ ಮುಖಂಡರ ಆಗ್ರಹಕ್ಕೆ ಉತ್ತರಿಸಿದ ಡಿಸಿಪಿ ಅಂಶು ಕುಮಾರ್, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ, ಇದನ್ನು ಅವರ ಗಮನಕ್ಕೆ ತರವಾಗುವುದು ಎಂದರು.
ಕಾಲನಿಗಳಲ್ಲಿ ನಡೆಯುವ ಕುಂದುಕೊರತೆ ಸಭೆಗೆ ನಾಗರಿಕ ಜಾರಿಹಕ್ಕು ನಿರ್ದೇಶನಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆ
ಅಧಿಕಾರಿಗಳನ್ನು ಆಹ್ವಾನಿಸಲಾಗುವುದು. ಕಮಿಷನರ್ ಕಚೇರಿಯಲ್ಲಿ ನಡೆಯುವ ಸಭೆಗೆ ಬರಲಾಗದವರು ಆಯಾ ಕಾಲನಿಗಳಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬಹುದು. ಇದಲ್ಲದೆ ಪ್ರತಿ ಬೀಟ್ ಮಟ್ಟದಲ್ಲೂ ದಲಿತರ ಕುಂದುಕೊರತೆಗೆ ಸ್ಪಂದಿಸುವಂತಾಗಬೇಕು. ದಲಿತ ಕೇರಿಗಳಲ್ಲಿ ಕಡ್ಡಾಯವಾಗಿ ಬೀಟ್ ವ್ಯವಸ್ಥಿತವಾಗಿ ನಡೆಯಬೇಕು ಎಂದರು.
ಬಡ್ತಿಗೆ ನ್ಯಾಯ ಒದಗಿಸಿ
2008ರಲ್ಲಿ ನಾನು ಬಡ್ತಿಗೆ ಅರ್ಹತೆ ಪಡೆದಿದ್ದು, ವಿಶ್ವವಿದ್ಯಾಲಯ ಈ ವರೆಗೆ ನನ್ನನ್ನು ಪರಿಗಣಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನಾನು ವಿವಿಗೆ ಸಲ್ಲಿಸಿದ ಮೂಲ ದಾಖಲೆಪತ್ರಗಳು ಕಳವಾಗಿದೆ ಎನ್ನುತ್ತಿದ್ದಾರೆ. ಹೀಗಾಗಿ ನನಗೆ ಬಡ್ತಿ ನೀಡುವ ಬಗ್ಗೆ ನ್ಯಾಯ ಒದಗಿಸುವಂತೆ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಉಮೇಶ್ಚಂದ್ರ ಅಹವಾಲು ಹೇಳಿದರು.
2003ರಲ್ಲಿ ನಾನು ವಿವಿ ಅಧ್ಯಾಪನ ವೃತ್ತಿಗೆ ಸೇರ್ಪಡೆಯಾದೆ. ಈಗ 20 ವರ್ಷದ ಸೇವಾನುಭವ ಇದ್ದರೂ ನನಗೆ ಪದೋನ್ನತಿ ದೊರೆತಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ವಿವಿ ಆಡಳಿತ ವಿಭಾಗಕ್ಕೆ ಸಲ್ಲಿಸಿದ್ದೆ. ಬಡ್ತಿ ಸಿಗದೇ ಇದ್ದಾಗ 2023ರ ಫೆಬ್ರವರಿಯಲ್ಲಿ ಮೂಲ ದಾಖಲೆಗಳನ್ನು ಮರಳಿಸುವಂತೆ ಕೋರಿಕೊಂಡಾಗ ಆ ದಾಖಲೆಗಳೇ ಇಲ್ಲ ಎಂದಿದ್ದಾರೆ. ಇದರಿಂದ ನನಗೆ ಬಹಳ ಅನ್ಯಾಯವಾಗಿದ್ದು, ನಾನು ಅರ್ಹತೆ ಇದ್ದರೂ ಬಡ್ತಿಯಿಂದ ವಂಚಿತನಾಗಿದ್ದು, ನ್ಯಾಯ ಒದಗಿಸುವಂತೆ ವಿನಂತಿಸಿದರು.
ಪುತ್ತೂರು ಘಟನೆ ನಮಗೆ ಪಾಠ
ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ದೌರ್ಜನ್ಯ ಘಟನೆ ಇಲಾಖೆಗೆ ಪಾಠವಾಗಿದೆ. ಯಾರದೋ ಒತ್ತಡಕ್ಕೆ ಒಳಗಾಗಿ ಕಾನೂನು ವ್ಯಾಪ್ತಿ ಮೀರಿ ಯಾರೂ ವರ್ತಿಸಬಾರದು. ನಮ್ಮ ತಲೆ ಮೇಲೆ ನಮ್ಮದೇ ಕೈ ಗೊತ್ತಿರಲಿ, ಅಂತಹ ಘಟನೆಗಳಿಗೆ ಇಲಾಖೆಯೇ ಹೊಣೆಯಾಗುತ್ತದೆ. ಈ ರೀತಿ ಇಲಾಖೆಗೆ ಕಪ್ಪುಚುಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಠಾಣಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಕೆಲವು ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದೂರುದಾರರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂಬ ದಲಿತ ಮುಖಂಡರ ಆರೋಪಕ್ಕೆ ಉತ್ತರಿಸಿದ ಅವರು, ಠಾಣೆಗೆ ಬರುವ ಯಾರನ್ನೂ ನಿಂದಿಸಬೇಡಿ, ಮುಂದೆ ಇಂತಹ ಆಪಾದನೆ ಬಾರದಂತೆ ನೋಡಿಕೊಳ್ಳಿ, ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿ. ಠಾಣೆಗೆ ಬಂದವರ ಜತೆ ಒಳ್ಳೆಯ ರೀತಿಯಿಂದ ಮಾತನಾಡಿ ಕಾನೂನು ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಿ ಎಂದು ದಿನೇಶ್ ಕುಮಾರ್ ಸಲಹೆ ನೀಡಿದರು.