ಮಂಗಳೂರು: ಆನ್‌ಲೈನ್ ಗೇಮ್ ಮತ್ತು ಕ್ರಿಕೆಟ್ ಬೆಟ್ಟಿಂಗ್‌ಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಶಾಲೆ ಬಿಟ್ಟು ಕೆಲಸಕ್ಕೆ ಹೋಗುವ ನಿದರ್ಶನವೂ ಇದೆ. ಆದ್ದರಿಂದ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ದಲಿತ ಮುಖಂಡ ಭಾಸ್ಕರ್ ಆಗ್ರಹಿಸಿದರು.
ಪಾಂಡೇಶ್ವರದ ರೊಸಾರಿಯೊ ಚರ್ಚ್ ಸಭಾಂಗಣದಲ್ಲಿ ಭಾನುವಾರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದುಕೊರತೆ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ಅಹವಾಲು ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಅವಮಾನ ಮಾಡುವುದು ಸೇರಿದಂತೆ ಕೋಮುಗಲಭೆಗೆ ಪೂರಕವಾದ ಅವಹೇಳನಕೇರಿ ಪೋಸ್ಟ್ ಹಾಕುವ ಬಗ್ಗೆ ಕಳೆದ ಸಭೆಯಲ್ಲಿ ದೂರು ನೀಡಲಾಗಿದ್ದರೂ ಕ್ರಮವಾಗಿಲ್ಲ ಎಂದು ದಲಿತ ನಾಯಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಈ ಬಗ್ಗೆ ಫೇಸ್‌ಬುಕ್ ಸಂಸ್ಥೆಯವರ ಜತೆ ಪತ್ರವ್ಯವಹಾರ ನಡೆಸಲಾಗಿದೆ ಎಂದರು.
ಯುವಕ ನಾಪತ್ತೆ ದೂರು
ಪೌರ ಕಾರ್ಮಿಕೆ ಶೋಭಾ ಎಂಬವರ 22ರ ಹರೆಯದ ಪುತ್ರ ಮನೋಜ್ ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದು, ಕಾವೂರು ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಇನ್ನೂ ಪತ್ತೆಯಾಗಿಲ್ಲ ಎಂದು ಮುಖಂಡ ಎಸ್.ಪಿ.ಆನಂದ ದೂರಿದರು.
ಈತ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗಾಗಿ ತಮ್ಮ ಮನೆ ಪಕ್ಕದ ವ್ಯಕ್ತಿಗೆ 25,000 ರೂ. ನೀಡಿದ್ದರು. ಒಂದು ತಿಂಗಳಾದರೂ ಬೈಕ್ ಸಿಗದ ಕಾರಣ ಹಣ ಮರಳಿ ಕೇಳಿದ್ದರು. ಇದಾಗಿ ಕೆಲ ದಿನಗಳ ಬಳಿಕ ಆ ವ್ಯಕ್ತಿ ಯುವಕನನ್ನು 10 ದಿನಗಳ ಕೂಲಿ ಕೆಲಸಕ್ಕಾಗಿ ಬರಲು ಹೇಳಿದ್ದರು. ಆ ಸಮಯದಿಂದ ಯುವಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ವ್ಯಕ್ತಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭ ಆತ ಹಣ ಪಡೆದಿರುವುದನ್ನು ಒಪ್ಪಿಕೊಂಡು ಎರಡು ಕಂತುಗಳಲ್ಲಿ ವಾಪಾಸು ಕೊಡುವುದಾಗಿ ಹೇಳಿ 10,000 ರೂ. ಹಿಂತಿರುಗಿಸಿದ್ದಾರೆ. ಆದರೆ ಬಾಕಿ ಹಣವೂ ವಾಪಾಸಾಗಿಲ್ಲ. ಒಂದೂವರೆ ತಿಂಗಳಿನಿಂದ ಯುವಕನ ಪತ್ತೆಯೂ ಆಗಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾವೂರು ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಗುರುರಾಜ್, ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಂತೆ ಆತ ಎರಡು ಕಂತುಗಳಲ್ಲಿ ಹಣ ವಾಪಾಸು ಕೊಡುವುದಾಗಿ ಹೇಳಿದ್ದು, ಯುವಕನ ನಾಪತ್ತೆಗೂ ತನಗೂ ಸಂಬಂಧ ಇಲ್ಲ ಹೇಳಿದ್ದಾರೆ. ನಾಪತ್ತೆ ಪ್ರಕರಣ ದಾಖಲಾಗಿದ್ದು, ಸಿಡಿಆರ್ ಹಾಕಲಾಗಿದೆ. ಯುವಕನ ಫೋನ್ ಸ್ವಿಚ್ ಆಫ್ ಆಗಿದೆ ಎಂದರು.
ಪ್ರಕರಣವನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಆಯುಕ್ತ ಅನುಪಮ್ ಅಗ್ರವಾಲ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದರು.
ಠಾಣೆಯಲ್ಲಿ ಸೌಜನ್ಯದಿಂದ ವರ್ತಿಸಿ
ಪೊಲೀಸ್ ಠಾಣೆಗೆ ಬರುವ ಜನರ ಜತೆ ಒರಟಾಗಿ ವರ್ತಿಸಲಾಗುತ್ತಿದೆ ಎಂದು ಮುಖಂಡರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಠಾಣೆಗಳಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿ ಸಮಾಜದ ಯಾರೇ ಮುಖಂಡ ಅಥವಾ ಜನಸಾಮಾನ್ಯ ಬಂದಾಗಲೂ ಗೌರವ ಕೊಟ್ಟು ವ್ಯವಹರಿಸಬೇಕು. ಯಾವುದೇ ದೂರಿನ ಸಂದರ್ಭ ಸಮಸ್ಯೆ ಇತ್ಯರ್ಥ ಪಡಿಸುವುದು ಮುಂದಿನ ವಿಚಾರ. ಆದರೆ ಠಾಣೆಗೆ ಬಂದವರ ಜತೆ ವಿನಯದಿಂದ ವರ್ತಿಸುವುದು ಮುಖ್ಯವಾಗಿರಬೇಕು ಎಂದು ಅವರು ಹೇಳಿದರು.
ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ
ಉರ್ವಾಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ದ.ಕ. ಜಿಲ್ಲಾ ಅಂಬೇಡ್ಕರ್ ಭವನ ರಸ್ತೆಗೆ ಗೋಚರಿಸುವುದಿಲ್ಲ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಎದುರಿನ ಕ್ವಾರ್ಟಸ್ ತೆರವುಗೊಳಿಸಿ ಅಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಚಂದ್ರ ಕುಮಾರ್ ಸೇರಿದಂತೆ ದಲಿತ ಮುಖಂಡರು ಆಗ್ರಹಿಸಿದರು.
ದಲಿತ ದೌಜನ್ಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣ ದಾಖಲಿಸುವುದು ನಡೆಯುತ್ತಿದೆ. ಇಂತಹ ಪ್ರಕರಣಗಳಲ್ಲಿ ದೂರು ನೀಡುವವರ ಜಾತಿ ಪ್ರಮಾಣ ಪತ್ರದ ಪರಿಶೀಲನೆ ನಡೆಸಬೇಕು ಎಂದು ಅನಿಲ್ ಉರ್ವಾಸ್ಟೋರ್ ಎಂಬವರು ದೂರಿದರು.
ರೋಗಿಯ ಚಿಕಿತ್ಸೆಗಾಗಿ ವೇಷ ಹಾಕಿಕೊಂಡು ಚಂದಾ ಎತ್ತುವ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ರೀತಿ ಸಂಗ್ರಹಿಸಿದ ಚಂದಾ ಸಂಬಂಧಪಟ್ಟವರಿಗೆ ತಲುಪುವ ಬಗ್ಗೆ ಸಂದೇಹವಿದೆ. ಅದರ ಬದಲು ಚಿಕಿತ್ಸೆ ಅಗತ್ಯ ಇರುವವರಿಗೆ ನೇರವಾಗಿ ಅಥವಾ ಸಂಸ್ಥೆಯ ಮೂಲಕ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.