ಜಿಲ್ಲೆ

ದಲಿತ ದೌರ್ಜನ್ಯ ಪ್ರಕರಣ ನ್ಯಾಯಯುತ ತನಿಖೆಯಾಗಬೇಕು - ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ಆಗ್ರಹ

ಮಂಗಳೂರು: ದಲಿತ ದೌರ್ಜನ್ಯ ಪ್ರಕರಣ ನಡೆದಾಗ ಕಾಯ್ದೆಯ ಪ್ರಕಾರ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ದಲಿತ ಕುಂದುಕೊರತೆ ಜಂಟಿ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.

ದಲಿತರ ಮೇಲೆ ದೌರ್ಜನ್ಯ ನಡೆದ ವೇಳೆ ಪ್ರಕರಣದ ಕೂಲಂಕುಷ ತನಿಖೆ ನಡಸದೆ ಹಿಂಬರಹ ನೀಡಿ ಪ್ರಕರಣ ಮುಗಿಸುವ ಕಾರ್ಯ ನಡೆಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ರಾಜಯ್ಯ ಎಂಬವರ ಮೇಲೆ ಪಕ್ಕದ ಮನೆಯವರು ದೌರ್ಜನ್ಯ ಎಸಗಿ ಜಾತಿ ನಿಂದನೆ ಮಾಡಿದ ಕುರಿತು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸರಿಯಾಗಿ ಪರಿಶೀಲನೆ ಮಾಡದೆ ಹಿಂಬರಹ ನೀಡಲಾಗಿದೆ ಎಂದು ದಲಿತ ಮುಖಂಡ ದೇವದಾಸ್ ಎಂ. ಹೇಳಿದರು.

ದಲಿತ ದೌರ್ಜನ್ಯ ಪ್ರಕರಣ ದಾಖಲಾದ ಸಂದರ್ಭ ಎಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದು, ಈ ಸಂದರ್ಭ ಎರಡೂ ಕಡೆಯ ವಾದಗಳನ್ನು ಆಲಿಸಲಾಗುತ್ತದೆ. ಆ ನಿಟ್ಟಿನಲ್ಲಿಯೇ ಕ್ರಮವನ್ನು ವಹಿಸಲಾಗುತ್ತದೆ. ಠಾಣಾ ಮಟ್ಟದಲ್ಲಿ ಯಾವುದೇ ಲೋಪ ಆಗಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಡಿಸಿಪಿ ಸಿದ್ದಾರ್ಥ್ ಗೋಯಲ್ ತಿಳಿಸಿದರು.

 112 ನಿಂದ ಸಿಗದ ಸ್ಪಂದನೆ

ಕೋಟೆಕಾರು ಸಹಕಾರಿ ಬ್ಯಾಂಕ್‌ನ ದರೋಡೆ ಪ್ರಕರಣದ ಸಂದರ್ಭ ಸಮೀಪದ ಮಹಿಳೆಯೊಬ್ಬರು 112ಗೆ ಕರೆ ಮಾಡಿದ್ದರೂ ಸ್ಪಂದನೆ ದೊರಕಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ಸೂಕ್ತವಾದ ಸಿಸಿಟಿವಿ ಹಾಗೂ ಸೈರನ್ ವ್ಯವಸ್ಥೆ ಇಲ್ಲದಿರುವುದು, ವಾಚ್‌ಮೆನ್ ನೇಮಕ ಮಾಡದಿರುವ ಮೂಲಕ ತೀರಾ ನಿರ್ಲಕ್ಷೃ ವಹಿಸಲಾಗಿದೆ. ಈ ಬಗ್ಗೆ ಸಹಕಾರಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗಿರೀಶ್‌ಕುಮಾರ್ ಎಂಬವರು ಆಗ್ರಹಿಸಿದರು.

ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಸಿ ಸೊತ್ತುಗಳನು ವಶಪಡಿಸಿಕೊಂಡಿದೆ. ಇಂತಹ ಪ್ರಕರಣದಲ್ಲಿ ಈ ರೀತಿಯಾಗಿ ನಿರ್ಲಕ್ಷೃ ಆಗಿದೆ ಎಂದಾಗಿದಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಘಟನೆಯ ಬಳಿಕ ಈಗಾಗಲೇ ಪೊಲೀಸ್ ಆಯುಕ್ತರು ನಗರದ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಬ್ಯಾಂಕ್‌ಗಳ ಸಭೆ ನಡೆಸಿ ಸೂಕ್ತ ಭದ್ರತಾ ವ್ಯವಸ್ಥೆಗೆ ಸೂಚನೆ ನೀಡಿದ್ದಾರೆ ಎಂದರು.

ಉಳ್ಳಾಲದಲ್ಲಿ ಮರಳು ಮಾಫಿಯಾ, ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಗಿರೀಶ್ ಕುಮಾರ್, ಪೊಲೀಸ್ ಠಾಣೆಗಳ ಸಿಬ್ಬಂದಿಯಿಂದಲೇ ಇಂತಹ ಅಕ್ರಮಗಳಿಗೆ ಸಹಕಾರ ದೊರೆಯುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಐದು ವರ್ಷ ಮೇಲ್ಪಟ್ಟು ಠಾಣೆಗಳಲ್ಲಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.