ಮಂಗಳೂರು: ಕುಶೆ ಸಂಸ್ಥೆಯು ಕಲೆಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡುತ್ತದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವು ಎಂಬುವುದು ಮುಖ್ಯವಲ್ಲ, ಇಂತಹ ಸ್ಪರ್ಧೆಗಳಿಂದ ನಾವು ಇನ್ನಷ್ಟು ಬೆಳವಣಿಗೆಯನ್ನು ಹೊಂದಲು ಸಾಧ್ಯ. ಮಕ್ಕಳ ಪ್ರತಿಭೆಯನ್ನು ಪಾಲಕರು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸರಿಗಮಪ ಕಾರ್ಯಕ್ರಮದ ಜ್ಯುರಿ ಪ್ಯಾನಲ್‌ನಲ್ಲಿ ಪ್ರಸಿದ್ಧರಾಗಿರುವ ಮಾಲಿನಿ ಕೇಶವ ಪ್ರಸಾದ್ ಹೇಳಿದರು.
ಮಂಗಳೂರು ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ಸರೋಜ್ ಮಧುಕಲೋತ್ಸವ- 2024 ಅಂತರ್ ಶಾಲಾ-ಕಾಲೇಜು ಮಟ್ಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಅಖಿಲ ಭಾರತ ಆಕಾಶವಾಣಿಯ, ಮಂಗಳೂರು ಕೇಂದ್ರದ ಹಿರಿಯ ಶ್ರೇಣಿ ಪ್ರಸಾರಕರಾಗಿ ಕಾರ್ಯನಿರ್ವಹಿಸಿರುವ ಮುದ್ದು ಮೂಡುಬೆಳ್ಳೆ ಮಾತನಾಡಿ, ಭಾರತೀಯ ಪರಂಪರೆ ಬಗ್ಗೆ ಬೆಳಕು ಚೆಲ್ಲುವ ಇಂತಹ ಸ್ಪರ್ಧೆಗಳು ಅಗತ್ಯವಾಗಿವೆ. ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆರೆಯಲು ಇಂತಹ ಸ್ಪರ್ಧೆಗಳು ಅವಕಾಶ ಮಾಡಿಕೊಡುತ್ತವೆ. ಜೀವನದ ಜತೆಗೆ ಕಲೆ, ಸಂಸ್ಕೃತಿ, ಅಭಿವ್ಯಕ್ತಿ ಕೂಡ ಅತಿ ಮುಖ್ಯ ಎಂದರು.
ಸರೋಜಿನಿ ಮಧುಸೂದನ ಕುಶೆ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಸರೋಜಿನಿ ಮಧುಸೂದನ್ ಕುಶೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಬಿಂದುಸಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಟ್ರಸ್ಟಿ ವಸಂತಿ ಹೊಸಬೆಟ್ಕರ್, ಪಿ.ವಿ.ಎಸ್. ಸಮೂಹ ಸಂಸ್ಥೆಯ ಮ್ಯಾನೇಜರ್ ಸಂದೇಶ್, ಅಧಿಕಾರಿಯಾದ ರಾಜಾರಾಮ್ ನಾಟೇಕರ್, ಲೆಕ್ಕ ಪರಿಶೋಧಕ ರಾಮುಲ್ ನಾಯ್ಡು, ಕರ್ಣಾಟಕ ಬ್ಯಾಂಕ್ ಅಧಿಕಾರಿಗಳಾದ ಗಿರೀಶ್ ಮತ್ತು ಕೇಶವಪ್ರಸಾದ್, ಲಕ್ಷ್ಮೀ ನಾರಾಯಣಿ ದೇವಸ್ಥಾನದ ಟ್ರಸ್ಟಿ ಕೃಷ್ಣ ಶೇಟ್, ಕಾಲೇಜಿನ ಎ.ಒ ಮುರಳೀಧರ್ ರಾವ್, ಉಪ ಪ್ರಾಂಶುಪಾಲೆ ಪವಿತ್ರಾ, ಸಹ ಮುಖ್ಯಶಿಕ್ಷಕಿ ಸೌಜನ್ಯಾ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ರಂಜಿತಾ, ಉಪ ಕಾರ್ಯದರ್ಶಿ ಪ್ರಶಾಂತಿ ಎಸ್. ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಜಯಪ್ರಭ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಪುಷ್ಪಾವತಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀಪತಿ ಭಟ್ ವಂದಿಸಿದರು.
ಪ್ರತಿಯೋರ್ವ ವಿದ್ಯಾರ್ಥಿಗಳ ಪ್ರತಿಭೆಯು ಅನಾವರಣಗೊಳ್ಳಬೇಕಾದರೆ ಮಧುಕಲೋತ್ಸವದಂತಹ ಸ್ಪರ್ಧೆಗಳು ಪ್ರತಿಭೆಗೆ ವೇದಿಕೆಯಾಗಿ ವಿದ್ಯಾರ್ಥಿಗಳಿಗೆ ಪ್ರಚೋದನೆ ಮತ್ತು ಕ್ರಿಯಾಶೀಲತೆಯ ವೇದಿಕೆಯಾಗಬೇಕು.
ಸರೋಜಿನಿ ಮಧುಸೂದನ್ ಕುಶೆ
ಸರೋಜಿನಿ ಮಧುಸೂದನ ಕುಶೆ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ
------
ಭಾರತೀಯ ಸಂಸ್ಕೃತಿಯು ಜಗತ್ತಿನಾದ್ಯಂತ ಪಸರಿಸಬೇಕು. ಅದಕ್ಕೆ ಪೂರಕವಾದ ವಾತಾವರಣ ಪ್ರತಿಯೊಂದು ವಿದ್ಯಾಸಂಸ್ಥೆಯಲ್ಲಿ ನಾಂದಿಯಾಗಬೇಕು. 24 ವರ್ಷಗಳಿಂದ ಮಧುಸೂದನ ಕುಶೆ ಶಾಲೆ ಈ ಮಧುಕಲೋತ್ಸವದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.
ಬಿಂದುಸಾರ ಶೆಟ್ಟಿ, ಕಾಲೇಜು ಪ್ರಾಂಶುಪಾಲ