ಜಿಲ್ಲೆ

ಮಂಗಳೂರಿಗೆ ಹಿರಿಯರ ಆರೈಕೆ ಕೇಂದ್ರ ಅಗತ್ಯವಿದೆ - ಸಮ್ಯಕ್ ಹೆಲ್ತ್‌ಕೇರ್ ಸರ್ವಿಸಸ್ ಉದ್ಘಾಟಿಸಿ ಡಾ.ಶಾಂತಾರಾಮ ಶೆಟ್ಟಿ

ಮಂಗಳೂರು: ಅತ್ಯಾಧುನಿಕ ಚಿಕಿತ್ಸೆಯ ಲಭ್ಯತೆಯ ಹಿನ್ನೆಲೆಯಲ್ಲಿ ಹಿರಿಯರ ಜೀವಿತಾವಧಿ ಹೆಚ್ಚಾಗುತ್ತಿದ್ದು, ಸಂಧ್ಯಾ ಕಾಲದಲ್ಲಿ ಅವರನ್ನು ಉತ್ತಮವಾಗಿ ನೋಡಿಕೊಳ್ಳಲು ಮಂಗಳೂರಿನಂತಹ ನಗರಗಳಲ್ಲಿ ಆರೈಕೆ ಕೇಂದ್ರಗಳ ಅಗತ್ಯವಿದೆ ಎಂದು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಮುಖ್ಯಸ್ಥ ಡಾ. ಶಾಂತಾರಾಮ ಶೆಟ್ಟಿ ಹೇಳಿದರು.

ಕೊಟ್ಟಾರ ಚೌಕಿ ಮಾಲಾಡಿ ಎಸ್ಟೇಟ್‌ನ ಡಾ.ಎಂ.ವಿ. ಶೆಟ್ಟಿ ಸ್ಪೀಚ್ ಆ್ಯಂಡ್ ಇಯರಿಂಗ್ ಸೆಂಟರ್ ಬಳಿಯಲ್ಲಿ ಸ್ಥಾಪನೆಯಾಗಿರುವ ಸಮ್ಯಕ್ ಹೆಲ್ತ್ ಕೇರ್ ಸರ್ವಿಸಸ್ ಕೇಂದ್ರ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದಶಕದ ಹಿಂದೆ ಭಾರತೀಯರ ಜೀವಿತಾವಧಿ 59 ವರ್ಷಗಳಾಗಿತ್ತು. ಈ ಬಳಿಕ ಆರೋಗ್ಯ ಕ್ಷೇತ್ರದಲ್ಲಾದ ಬದಲಾಣೆಗಳಿಂದ 10 ವರ್ಷಗಳಲ್ಲಿ ಜೀವಿತಾವಧಿ 68ಕ್ಕೆ ತಲುಪಿ ಬಿಟ್ಟಿದೆ. ಇನ್ನು ಜಪಾನ್, ಐರೋಪ್ಯ ರಾಷ್ಟ್ರಗಳಲ್ಲಿ ಈ ಅವಧಿ ಹೆಚ್ಚುತ್ತಾ ಹೋಗುತ್ತಿದೆ. ಹಿರಿಯರಿಗೆ ಹಣದ ಅವಶ್ಯಕತೆಗಿಂತ ಹೆಚ್ಚಾಗಿ ವೃದ್ದಾಪ್ಯದಲ್ಲಿ ಅವರನ್ನು ಪ್ರೀತಿ, ಕಾಳಜಿ, ವಿಶ್ವಾಸದ ಜತೆಗೆ ಅರ್ಥ ಮಾಡಿಕೊಂಡು ಅವರನ್ನು ನೋಡಿಕೊಳ್ಳುವ ಕೇಂದ್ರಗಳ ಅಗತ್ಯವಿದೆ. ಇಂದಿನ ಯುವಜನತೆ ಅವರ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ಬೆಳೆಯುತ್ತಿರುವ ನಗರದ ಜತೆಗೆ ಹಿರಿಯರ ನಗರವಾಗಿ ಬದಲಾಗುತ್ತಿದೆ. ಹಿರಿಯರು ಊರಿನಲ್ಲಿ ಬದುಕುತ್ತಿದ್ದರೆ ಅವರ ಮಕ್ಕಳು ವಿದೇಶಿ ನೆಲದಲ್ಲಿ ದುಡಿಯುತ್ತಿದ್ದಾರೆ. ಇಂತಹ ಹಿರಿಯರು ಸುರಕ್ಷಿತವಾಗಿ ಯಾವುದೇ ಭಯ ಇಲ್ಲದೇ ಬದುಕುವ ಕೇಂದ್ರಗಳ ಅಗತ್ಯವಿದ್ದು, ಈ ಕೆಲಸವನ್ನು ಸಮ್ಯಕ್ ಹೆಲ್ತ್ ಕೇರ್ ಸರ್ವಿಸಸ್ ಮಾಡಿದೆ ಎನ್ನುವುದು ಶ್ಲಾಘನೀಯ ಎಂದರು.

ಮಂಗಳೂರಿನ ಎ.ಜೆ. ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನ ನಿರ್ದೇಶಕರಾದ ಡಾ.ಅಮಿತಾ ಮಾರ್ಲ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ಕೋಲಾರ ದೇವರಾಜ ಅರಸ್ ಕಾಲೇಜಿನ ನಿವೃತ್ತ ಪ್ರೊ ಚಾನ್ಸಿಲರ್ ಡಾ.ರಘುವೀರ್, ದ.ಕ.ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಯೆನೆಪೋಯ ಮೆಡಿಕಲ್ ಕಾಲೇಜಿನ ಜಿರಿಯಾಟ್ರಿಕ್ ವಿಭಾಗದ ಪ್ರಾಧ್ಯಾಪಕಿ ಡಾ.ಪ್ರಭಾ ಅಧಿಕಾರಿ, ಟೀಮ್ ಬ್ರೈಟ್ ಗ್ರೂಪ್‌ನ ಡಾ.ಹವ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು.

ಸಮ್ಯಕ್ ಹೆಲ್ತ್ ಕೇರ್‌ನ ಮುಖ್ಯಸ್ಥ ಮೋಹನ ರಾಜ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಸಮ್ಯಕ್ ಹೆಲ್ತ್ ಕೇರ್ ಸರ್ವಿಸಸ್ ವಿಶೇಷತೆ

ಸಮ್ಯಕ್ ಹೆಲ್ತ್‌ಕೇರ್ ವಿಶ್ರಾಂತಿ ಜೀವನ ನಡೆಸುತ್ತಿರುವ ಹಿರಿಯ ನಾಗರಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕವಾದ ಹವಾ ನಿಯಂತ್ರಿತ ಕೊಠಡಿ, ಊಟ, ಚಾ-ತಿಂಡಿ, ವೈದ್ಯಕೀಯ ನೆರವು, ನಸಿರ್ಂಗ್ ಸೇವೆಗಳ ಜತೆಗೆ ಸುಸಜ್ಜಿತ ಸೌಲಭ್ಯವನ್ನು ಒದಗಿಸಿ ಕೊಡಲಾಗುತ್ತದೆ. ಈ ಸೌಲಭ್ಯವನ್ನು ಬಯಸುವವರು ತಮ್ಮ ಹಿರಿಯ ಪೋಷಕರನ್ನು ಇಲ್ಲಿ ಸೇರಿಸಿ ನಿಶ್ಚಿಂತೆಯಿಂದ ಇರಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕ ಮಾಡಬಹುದು.