ಜಿಲ್ಲೆ

ಸಂತ ಅಲೋಶಿಯಸ್ ಆವರಣದಲ್ಲಿದ್ದ ಸಮೋಸ, ಮಿಠಾಯಿ ಅಜ್ಜ ಇನ್ನಿಲ್ಲ

ಹರೀಶ ಎಂ.


ಮಂಗಳೂರು: ಬಿಳಿ ಪೈಜಾಮು, ಗಾಂಧಿ ಟೋಪಿ ಧರಿಸಿ ಬಾವುಟಗುಡ್ಡೆ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ 45 ವರ್ಷಗಳಿಂದ ಮಿಠಾಯಿ, ಸಮೋಸ ಮಾರಾಟ ಮಾಡುತ್ತಿದ್ದ ಮಲ್ಲಿಕಾರ್ಜುನ ಮುದಿಯಪ್ಪ ಮಳಗಿ (ಎಂ.ಎಂ.ಮಳಗಿ) (86) ವಯೋ ಸಹಜ ಅಸೌಖ್ಯದಿಂದ ಬುಧವಾರ ಬಾದಾಮಿ ಮಳಗಿಯಲ್ಲಿ ನಿಧನರಾದರು.


ಪತ್ನಿ, ಪುತ್ರ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಕಾವೂರಿನ ಜ್ಯೋತಿನಗರದಲ್ಲಿ ನೆಲೆಸಿದ್ದ ಅವರು ಇತ್ತೀಚಿನವರೆಗೂ ಪ್ರತಿ ದಿನ ಬೆಳಗ್ಗೆ 8.30ಕ್ಕೆ ಕಾಲೇಜು ಆವರಣಕ್ಕೆ ಮಿಠಾಯಿ, ಸಮೋಸ, ಪಪ್ಸ್ ಮೊದಲಾದ ತಿಂಡಿಗಳೊಂದಿಗೆ ಬರುತ್ತಿದ್ದ ಇವರು ಮಧ್ಯಾಹ್ನ 3 ಗಂಟೆಗೆ ತನಕ ವ್ಯಾಪಾರ ಮಾಡಿ ತೆರಳುತ್ತಿದ್ದರು.


ಕಾಲೇಜಿನ ಫಾದರ್‌ಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಮಿಠಾಯಿ, ಸಮೋಸ ಅಜ್ಜ ಆಗಿದ್ದರು. ಇಳಿ ವಯಸ್ಸಿನವರೆಗೂ ಸ್ವಾವಲಂಬಿಯಾಗಿ ಬದುಕಿ, ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಶುಚಿತ್ವಕ್ಕೆ ಆದ್ಯತೆ ನೀಡಿದ್ದ ಕಾರಣ ಕಾಲೇಜು ಆಡಳಿತ ಮಂಡಳಿಯವರಿಂದಲೂ ಮಿಠಾಯಿ ಅಜ್ಜ ಪ್ರೀತಿಗೆ ಪಾತ್ರರಾಗಿದ್ದರು. ಹಳೇ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೆ ಅಜ್ಜನನ್ನು ಹುಡುಕಿ ಮಾತನಾಡಿಸಿ ಹೋಗುತ್ತಿದ್ದರು.