ಜಿಲ್ಲೆ

ಶತ್ರುಬುದ್ಧಿ ವಿನಾಶ ಎಂಬುದು ವಸುದೈವ ಕುಟುಂಬಕಂನ ಮೊದಲ ಹೆಜ್ಜೆ - ಹಿರಿಯ ಚಿಂತಕ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ವಿಶ್ಲೇಷಣೆ

ಹರೀಶ ಎಂ.

ಮಂಗಳೂರು: ಆಧುನಿಕ ಕಾಲಘಟ್ಟದಲ್ಲಿ ಒಂದು ಕುಟುಂಬದಲ್ಲಿ ಎಷ್ಟು ಜನ ಇದ್ದೇವೆ, ಎಷ್ಟು ಪೀಳಿಗೆಗಳು ಇವೆ ಎಂಬ ಬಗ್ಗೆ ಚಿಂತನೆಗಳು ನಡೆಯಬೇಕು. ಕೌಟುಂಬಿಕ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಂಪ್ರದಾಯ ಕುಟುಂಬಗಳಲ್ಲಿ ಬೆಳೆಯಬೇಕು. ಭಾರತೀಯ ಕುಟುಂಬ ವ್ಯವಸ್ಥೆಯು ರಿಲೇ ಪದ್ಧತಿಯಂತೆ. ಆ ಪರಂಪರೆ ಮುಂದುವರಿಯಬೇಕು. ನಮ್ಮ ಶ್ಲೋಕಗಳಲ್ಲಿ ಹೇಳುವ ಶತ್ರುಬುದ್ಧಿ ವಿನಾಶಾಯ ಅಂದರೆ ನಮ್ಮಲ್ಲಿರುವ ಶತ್ರುವಿನ ಬುದ್ಧಿಯನ್ನು ಬಿಟ್ಟು ಮಿತ್ರತ್ವವನ್ನು ಸಂಪಾದಿಸುವ ಕಲೆ ಕರಗತ ಮಾಡಿಕೊಳ್ಳುವುದೇ ವಸುದೈವ ಕುಟುಂಬಕಂನ ಮೊದಲ ಹೆಜ್ಜೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಅಭಿಪ್ರಾಯಪಟ್ಟರು.

ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಶುಕ್ರವಾರ ಮಂಥನ ಕಾವೂರು ತಂಡದ ೧೨ನೇ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ವಿಚಾರ ಮಂಡನೆ ಮಾಡಿದರು.

ವಸುದೈವ ಕುಟುಂಬಕಂನ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಆರು ಮುಖ್ಯ ಅಂಶಗಳನ್ನು ಪಾಲಿಸಬೇಕು. ಮೊದಲನೆಯದಾಗಿ ಭಜನೆ ಮತ್ತು ಭೋಜನ. ಈ ಎರಡು ಅಂಶಗಳು ಕುಟುಂಬದ ಸದಸ್ಯರ ಸಾಮೂಹಿಕ ನಿರ್ಧಾರದಿಂದ ಆಗುವಂಥದ್ದು. ಈಗಿನ ಕಾಲದಲ್ಲಿ ಟಿವಿ ಮತ್ತು ಮೊಬೈಲ್‌ಗಳ ಮೇಲೆ ನಾವೆಲ್ಲರೂ ಅವಲಂಬಿತವಾಗಿರುವುದರಿಂದ ಯಾರಿಗೂ ಪುರುಸೊತ್ತು ಇಲ್ಲ ಎಂಬಂತಾಗಿದೆ. ಇದರಿಂದ ಮನೆಮನೆಯಲ್ಲಿ ನಡೆಯುತ್ತಿದ್ದ ಭಜನೆ ನಿಂತುಹೋಗಿದೆ. ಇದು ಮತ್ತೆ ಆರಂಭವಾಗಬೇಕು. ಹೀಗೆ ಭಜನೆಯ ಪರಂಪರೆ ಆರಂಭವಾದರೆ ಅದರಿಂದ ಪರಸ್ಪರ ಮಾತನಾಡುವ, ಒಟ್ಟಿಗೆ ಕುಳಿತು ಸಮಾಲೋಚನೆ ಮಾಡುವ ಮನೋಭಾವ ಬೆಳೆಯುತ್ತದೆ. ಕವಿ ಡಿವಿಜಿಯವರು ಹೇಳಿದಂತೆ ನಗುವು ಸಹಜ ಧರ್ಮ, ನಗಿಸುವುದು ಪರ ಧರ್ಮ ಎಂಬಂತೆ ನಗುವಿನಿಂದ ಬಂಧುತ್ವದ ಭಾವ ಗಟ್ಟಿಯಾಗುತ್ತದೆ. ಒಟ್ಟಿಗೆ ಕುಳಿತು ಭೋಜನ ಮಾಡುವ ಪ್ರಕ್ರಿಯೆಯಿಂದ ಮನೆಯವರೆಲ್ಲರೂ ಜೊತೆಯಾಗಿ ಸುಖ -ದುಃಖಗಳನ್ನು ಹಂಚಿಕೊಳ್ಳಬಹುದು. ಒಟ್ಟಿಗೆ ಕುಳಿತು ಮಾತನಾಡುವ ಪ್ರಕ್ರಿಯೆ ಆರಂಭವಾದರೆ ನಮ್ಮ ಮಕ್ಕಳ ಮನಸ್ಸಿನಲ್ಲಿರುವ ನಕಾರಾತ್ಮಕ ಅಂಶಗಳನ್ನು ತೊಡೆದು ಹಾಕುತ್ತ ಅವರಲ್ಲಿ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಂಡು ಬರಬಹುದು ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ವಿಶ್ಲೇಷಿಸಿದರು.

ವಸುದೈವ ಕುಟುಂಬಕಂನ ಎರಡನೇ ಹಂತ ಭಾಷೆ ಮತ್ತು ಭೂಷಣ. ಭಾರತೀಯ ಭಾಷೆ ಎಂಬುದು ಬಂಧುತ್ವದ ಭಾಷೆ. ಬಂಧುತ್ವವನ್ನು ನಮ್ಮ ಭಾರತೀಯ ಭಾಷೆಯಲ್ಲಿ ಹೇಳುವಾಗ ಸಿಗುವ ಆನಂದವೇ ಬೇರೆ. ನಮ್ಮ ಭಾಷೆ ಮತ್ತು ವೇಷಭೂಷಣ ನಮ್ಮ ಚಿಂತನೆಯ ಶೈಲಿಯನ್ನು ತಿಳಿಸುತ್ತದೆ. ನಮ್ಮ ಜೀವನಶೈಲಿ, ಚಿಂತನೆಗಳು, ಹಬ್ಬಗಳ ಆಚರಣೆಯ ಶೈಲಿ ಭಾರತೀಯ ಶೈಲಿಯಾಗಿ ಹೊರಹೊಮ್ಮಿದರೆ ನಮ್ಮ ಕೌಟುಂಬಿಕ ಪರಂಪರೆ, ಮೌಲ್ಯಗಳು ಉಳಿಯುತ್ತವೆ ಎಂದು ತಿಳಿಸಿದರು.

ವಸುದೈವ ಕುಟುಂಬಕಂನ ಮೂರನೇ ಹಂತ ಭವನ ಮತ್ತು ಭ್ರಮಣ. ನಮ್ಮ ಮನೆಯೇ ದೇವಾಲಯ ಆಗಬೇಕು. ಅಂತಹ ವಾತಾವರಣ ಮನೆಯಲ್ಲಿ ನಿರ್ಮಾಣವಾದರೆ ದೇವರೇ ಮನೆಯಲ್ಲಿ ನೆಲೆಸಿದ ಅನುಭವ ಉಂಟಾಗುತ್ತದೆ. ಮನೆಯೇ ವಿದ್ಯಾಲಯ, ಸೇವಾಲಯವಾಗಿ ಬದಲಾದಾಗ ಕೌಟುಂಬಿಕ ವಾತಾವರಣವೇ ಬದಲಾಗುತ್ತದೆ. ಅದೇ ರೀತಿ ವರ್ಷದಲ್ಲಿ ಮೂರ್ನಾಲ್ಕು ದಿನವಾದರೂ ಮನೆಯವರೆಲ್ಲರೂ ಜೊತೆಯಾಗಿ ತೀರ್ಥಕ್ಷೇತ್ರ ಮಾಡಿಬಂದರೆ ಪರಸ್ಪರ ನಮ್ಮನ್ನು ನಾವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾವೂರು ನಗರ ಸಂಘಚಾಲಕ್‌ ಬಿ.ಕೆ.ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಮೋಹನ್‌ದಾಸ್‌ ಮರಕಡ ಸ್ವಾಗತಿಸಿದರು. ಸಂಗೀತಾ ಪುಸ್ತಕ ಪರಿಚಯ ಮಾಡಿದರು. ಗಣೇಶ್‌ ಚೇತನ್‌ ಕಾರ್ಯಕ್ರಮ ನಿರೂಪಿಸಿದರು. ನೀತಾ ಶೆಟ್ಟಿ ವಂದಿಸಿದರು.