ಜಿಲ್ಲೆ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ - ಸಂಚಾರ ನಿಯಮ ಪಾಲನೆಯಿಂದ ಪ್ರಾಣ ರಕ್ಷಣೆ ನಟ ಅರವಿಂದ ಬೋಳಾರ್

ಹರೀಶ ಎಂ.

ಮಂಗಳೂರು: ಸುರಕ್ಷತೆ ನಮ್ಮ ಕೈಯಲ್ಲಿದೆ. ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆ. ಸಂಚಾರ ನಿಯಮಗಳನ್ನು ಗೌರವಿಸಿ ಎಲ್ಲರ ಜೀವ ಉಳಿಸುವುದು ಜವಾಬ್ದಾರಿ ಎಂದು ಚಿತ್ರನಟ ಅರವಿಂದ ಬೋಳಾರ್ ಹೇಳಿದರು.

ಮಂಗಳೂರು ನಗರ ಸಂಚಾರ ಪೊಲೀಸ್ ಮತ್ತು ಸಾರಿಗೆ ಇಲಾಖೆ ಜಂಟಿ ಆಶ್ರಯದಲ್ಲಿ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ಗುರುವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಕ್ಕಳಿಗೆ ವಾಹನ ಕೊಡುವಾಗ ಹೆತ್ತವರು ಯೋಚಿಸಬೇಕು. ನಮ್ಮಿಂದಾಗಿ ಯಾರಿಗೂ ತೊಂದರೆಯಾಗಬಾರದು. ಎಲ್ಲರೂ ನಿಯಮ ಪಾಲನೆ ಮಾಡಿದಾಗ ದೇಶಕ್ಕೆ ಒಳ್ಳೆಯದಾಗಲಿದೆ ಎಂದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗ್ರವಾಲ್, ಪ್ರತಿ ವರ್ಷ ರಸ್ತೆ ಸುರಕ್ಷತಾ ಮಾಸಾಚರಣೆ ಮಾಡಲಾಗುತ್ತದೆ. ರಸ್ತೆ ಅಪಘಾತದಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಳೆದ ವರ್ಷ ಮಂಗಳೂರಿನಲ್ಲಿ 110 ಮಂದಿ ರಸ್ತೆ ಅಪಘಾತದಿಂದಾಗಿ ಪ್ರಾಣ ಕಳೆದು ಕೊಂಡಿದ್ದಾರೆ. ನಿರ್ಲಕ್ಷೃದಿಂದಲೇ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಕಳೆದ ವರ್ಷ 80,000 ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ನಡೆಸಲಾಗಿದೆ ಎಂದು ತಿಳಿಸಿದರು.

ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ರವಿಶಂಕರ್, ಪಿ.ಉಮೆಶ್ , ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ , ಸಾರಿಗೆ ಉಪ ಆಯುಕ್ತ ಶ್ರೀಧರ ಕೆ ಮಲ್ಲಾಡ್, ಫಿಝಾ ಬೈ ನೆಕ್ಸಸ್ ಮಾಲ್‌ನ ಎಜಿಎಂ ಸುನೀಲ್ ಕೆ.ಎಸ್. ಉಪಸ್ಥಿತರಿದ್ದರು.

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆಯ ಬಗ್ಗೆ ಬೀದಿ ನಾಟಕ ನಡೆಯಿತು. ಕ್ರಿಸ್ಟ್ ಮತ್ತು ರೀಮಾ ಅವರು ಅಪಘಾತದಿಂದ ತಮ್ಮ ಕುಟುಂಬಕ್ಕಾದ ಆಘಾತದ ಬಗ್ಗೆ ಅರಿವು ನೀಡಿದರು.

ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಫ್ರಾನ್ಸಿಸ್ ಮಾಕ್ಸಿಮ್ ಮೊರಾಸ್, ಸುನಿಲ್ ಡಿಸೋಜ, ರೋಶನ್ ರಾಯ್ ಸಿಕ್ವೇರಾ ಮತ್ತು ರಮೇಶ್ ಕಾವೂರು ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸಂಚಾರಿ ವಿಷಯಗಳ ಬಗ್ಗೆ ರಸಪ್ರಶ್ನೆ ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು. ಆರ್‌ಜೆ ಅನುರಾಗ್ ಮತ್ತು ಅಕ್ಷತಾ ಅವರು ನಿರೂಪಿಸಿದರು.

ಅಪಘಾತದಲ್ಲಿ ಒಂದೇ ವರ್ಷ 11,300 ಮಂದಿ ಮೃತ್ಯು

ರಾಜ್ಯದಲ್ಲಿ 2024ರಲ್ಲಿ 42,000 ಅಪಘಾತ ಪ್ರಕರಣಗಳು ವರದಿಯಾಗಿದ್ದು, 11,300 ಮಂದಿ ಮೃತಪಟ್ಟಿದ್ದಾರೆ. 54,400 ಮಂದಿ ಗಾಯಗೊಂಡಿದ್ದಾರೆ. ಮಂಗಳೂರು ನಗರದಲ್ಲಿ 2024ರಲ್ಲಿ 160 ಮಾರಣಾಂತಿಕ ಮತ್ತು 863 ಮಾರಣಾಂತಿಕವಲ್ಲದ ಸೇರಿದಂತೆ 1023 ಅಪಘಾತಗಳು ಸಂಭವಿಸಿವೆ. 165 ಮಂದಿ ಮೃತಪಟ್ಟು, 1186 ಮಂದಿ ಗಾಯಗೊಂಡಿದ್ದಾರೆ.