ಜಿಲ್ಲೆ

ಕಾವೂರು ರಸ್ತೆಯಲ್ಲಿನ ಮರಳಿನಿಂದ ದ್ವಿಚಕ್ರ ವಾಹನ ಸ್ಕಿಡ್ - ಲಾರಿಯಡಿಗೆ ಬಿದ್ದು ಸವಾರ ಮೃತ್ಯು

ಮಂಗಳೂರು: ಕಾವೂರು ಜಂಕ್ಷನ್ ಬಳಿ ಮಂಗಳವಾರ ಬೆಳಗ್ಗೆ ಸ್ಕಿಡ್ ಆಗಿ ಬಿದ್ದ ಸ್ಕೂಟರ್‌ನ ಮೇಲೆ ಲಾರಿ ಹರಿದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.

ಮಂಗಳೂರಿನ ಬಟ್ಟಗುಡ್ಡ ನಿವಾಸಿ, ಎಲೆಕ್ಟ್ರೀಷಿಯನ್ ಆಗಿದ್ದ ಪ್ರಕಾಶ್ ಅಂಚನ್(53) ಮೃತಪಟ್ಟವರು.

ಪ್ರಕಾಶ್ ಅವರು ಸ್ಕೂಟರ್‌ನಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಮರಕಡ ಕಡೆಯಿಂದ ಕಾವೂರು ಕಡೆಗೆ ಬರುತ್ತಿದ್ದಾಗ ಕಾವೂರು ಜಂಕ್ಷನ್ ಬಳಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿ ಅವರ ಮೇಲೆಯೇ ಸಂಚರಿಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟರು. ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾಯಕಾರಿ ಮರಳು, ಮಣ್ಣು

ಇತ್ತೀಚೆಗೆ ಸುರಿದ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಮಣ್ಣು, ಮರಳು ರಸ್ತೆಯ ಅಂಚಿನಲ್ಲಿ ಶೇಖರಣೆಯಾಗಿದ್ದು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ಪ್ರಕಾಶ್ ಅವರ ಸ್ಕೂಟರ್ ಸ್ಕಿಡ್ ಆಗಲು ಕೂಡ ರಸ್ತೆ ಬದಿ ಮರಳು ಶೇಖರಣೆಯಾಗಿದ್ದೇ ಕಾರಣ ಎನ್ನಲಾಗಿದೆ. ಘಟನೆಯ ಅನಂತರ ಸ್ಥಳೀಯರು ರಸ್ತೆ ಬದಿ ಇದ್ದ ಮರಳು, ಮಣ್ಣನ್ನು ಗುಡಿಸಿ ತೆರವುಗೊಳಿಸಿದರು.