ಮಂಗಳೂರು:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದು, ವಿಡಿಯೋ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬಲ್ಲಾಡಿ ಚಿಂಪೆಟ್ಟು ನಿವಾಸಿ ಅಶ್ವಥ್ (22) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ: ಅಪರಾಧಿ ಅಶ್ವಥ್ 17 ವರ್ಷದ ಬಾಲಕಿಯನ್ನು ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯಿಸಿಕೊಂಡು ಸ್ನೇಹ ಬೆಳೆಸಿ 2023 ಮಾ.15ರಂದು ಮೂಲ್ಕಿಯಿಂದ ಮಣಿಪಾಲದ ಲಾಡ್ಜೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಇದರ ವಿಡಿಯೋ ರೆಕಾರ್ಡ್ ಮಾಡಿ ಬಳಿಕ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೆ ರವಾನಿಸಿದ್ದ. ನಂತರ ಈ ವಿಡಿಯೋ ಬಾಲಕಿಯ ತಂದೆಗೂ ಬಂದಿತ್ತು. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾಧಿಕಾರಿ ವಿದ್ಯಾಧರ್ ಡಿ ಬಾಯ್ಕೇರಿಕರ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 ಫೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ ಒಟ್ಟು 24 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ. 49 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಕರಣದ ಸಾಕ್ಷೃ ಮತ್ತು ದಾಖಲೆಗಳು ಹಾಗೂ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ತೀರ್ಪು ಪ್ರಕಟಿಸಿದ್ದಾರೆ.
ಕಲಂ 6 ಪೋಕ್ಸೋ ಕಾಯ್ದೆಯಂತೆ 20 ವರ್ಷಗಳ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ, ಕಲಂ12ರಂತೆ 2 ವರ್ಷಗಳ ಸಾದಾ ಶಿಕ್ಷೆ, 5 ಸಾವಿರ ರೂ. ದಂಡ, ಕಲಂ 363ರಡಿ 3 ವರ್ಷಗಳ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ 3 ವರ್ಷಗಳ ಕಾಲ ಕಠಿಣ ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತ 1 ಲಕ್ಷ ರೂ. ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಅವರು ಸರ್ಕಾರದ ಪರ ವಾದ ಮಾಂಡಿಸಿದ್ದರು.
ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 4 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.