ಮಂಗಳೂರು: ಪ್ರತಿಯೊಬ್ಬರ ಆಂತರ್ಯದಲ್ಲಿ ಅಡಗಿರುವ ದಿವ್ಯತೆಯನ್ನು ಚಲನ ವಲನಗಳಲ್ಲಿ ಅಭಿವ್ಯಕ್ತಗೊಳಿಸುವುದು ಅವಶ್ಯ. ಆಗ ಮಾತ್ರ ನಾವು ಬಾಹ್ಯ ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹೇಳಿದರು.
ರಾಷ್ಟ್ರೀಯ ಯುವ ದಿನದ ಅಂಗವಾಗಿ ಗುರುವಾರ ಮಂಗಳಾದೇವಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿದ ಮೌಲ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದಿ ಅಭಿವ್ಯಕ್ತವಾಗಿ ಮನಸ್ಸಿನ ಶಕ್ತಿ ಊರ್ದ್ವಮುಖವಾದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ, ಪ್ರೀತಿ, ವಿಶ್ವಾಸದ ಬದುಕು ಸಾಧ್ಯವಾಗುತ್ತದೆ. ಎಲ್ಲೆಡೆ ಸ್ವಾರ್ಥ, ದ್ವೇಷ, ಯುದ್ಧಗಳು ನಡೆಯಲು ಮನಸ್ಸಿನ ಕ್ಷೇಷ ಕಾರಣವಾಗಿದೆ. ಮನಸ್ಸನ್ನು ಶುದ್ಧೀಕರಿಸದ ಹೊರತು ಸಮಾಜದ ಸುಧಾರಣೆ ಸಾಧ್ಯವಿಲ್ಲ. ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆ ಮಾಡಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದರ ಜತೆಗೆ ಸುಂದರ ಬದಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಭಾರತದ ಶೇ.60ರಷ್ಟಿರುವ ಯುವ ಜನತೆಯ ಮೇಲೆ ದೇಶದ ಭವಿಷ್ಯ ನಿಂತಿದೆ. ಯುವಕರ ವ್ಯಕ್ತಿತ್ವ ಪರಿವರ್ತನೆಯಾಗಲು ನಮ್ಮಲ್ಲಿ ಹುದುಗಿರುವ ಜ್ಞಾನಶಕ್ತಿ, ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮದತ್ತ ಒಲವು ತೋರಬೇಕು. ಮೊದಲು ನಮ್ಮನ್ನು ಅರಿತುಕೊಂಡಾಗ ಸಮಾಜದ ನ್ಯೂನತೆ ತಿಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೌಲ್ಯ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿದೆ ಎಂದವರು ಹೇಳಿದರು.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿದ್ದರು. ಯುವಕರು ತಮ್ಮ ಸಾಮರ್ಥ್ಯ ಅರಿತುಕೊಂಡು ಮುನ್ನಡೆಯಬೇಕು. ಮುಂದಿನ 25 ವರ್ಷ ಭಾರತದ ಅಮೃತ ಕಾಲವಾಗಿದ್ದು, ಸುಸ್ಥಿರ ಆರ್ಥಿಕತೆ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಗದಗ ಮತ್ತು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಆಂತರಿಕ ಶಕ್ತಿಯ ಜಾಗೃತಿ - ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬೆಂಗಳೂರಿನ ಯೂಥ್ ಫಾರ್ ಪರಿವರ್ತನ್ ಸಂಸ್ಥೆಯ ಅಧ್ಯಕ್ಷರು ಮತ್ತು ಸ್ಥಾಪಕ ಅಮಿತ್ ಅಮರ್‌ನಾಥ್ ಅವರು ಸೇವೆಯ ಶಕ್ತಿ - ಯುವಜನತೆ ಹೇಗೆ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಮಹಾರಾಜ್ ಪ್ರಸ್ತಾವನೆಗೈದರು. ಮಂಗಳೂರು ರಾಮಕೃಷ್ಣ ಮಿಷನ್ ನ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಾಲೇಜುಗಳಿಂದ ಸುಮಾರು 600ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗವಹಿಸಿದ್ದರು.
ಅಧ್ಯಯನ ಕೇಂದ್ರ ಉದ್ಘಾಟನೆ
ಶ್ರೀ ರಾಮಕೃಷ್ಣ ಮಠದಲ್ಲಿ ಶ್ರೀ ಶಾರದಾ ದೇವಿ ಅಧ್ಯಯನ ಕೇಂದ್ರ (ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಓದುವ ಕೊಠಡಿ) ಉದ್ಘಾಟಿಸಲಾಯಿತು. ಮನೆಯಲ್ಲಿ ಓದಲು ಸಮಸ್ಯೆ ಇರುವವರು ಇಲ್ಲಿ ಬಂದು ಓದಲು ಎಲ್ಲಾ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ತನಕ ಈ ಕೊಠಡಿ ತೆರೆದಿರುತ್ತದೆ. ಆಸಕ್ತರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸ್ವಾಮಿ ಜಿತಕಾಮಾನಂದ ಮಹಾರಾಜ್ ತಿಳಿಸಿದ್ದಾರೆ.