ಜಿಲ್ಲೆ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ವಾಮಂಜೂರು ಪರಿಸರಸರದಲ್ಲಿ 11ನೇ ತಿಂಗಳ ಶ್ರಮದಾನ ಸುಮಾರು 400 ಗಿಡಗಳನ್ನು ನೆಟ್ಟ ಸ್ವಯಂಸೇವಕರು

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಹನ್ನೊಂದನೇ ತಿಂಗಳ ಸ್ವಚ್ಛತಾ ಅಭಿಯಾನ ಭಾನುವಾರ ಬೆಳಗ್ಗೆ ವಾಮಂಜೂರು ಪರಿಸರದಲ್ಲಿ ಜರುಗಿತು.


ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ಮೈಸೂರಿನ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜಿ ಹಾಗೂ ಜೆಪ್ಪು ಸಂತ ಜೋಸೆಫ್ ಸೆಮಿನಾರಿಯ ಧರ್ಮಗುರು ಫಾ.ರೆನಾಲ್ಡ್ ಸೆರಾವೋ , ವಾಮಂಜೂರು ಪಚ್ಚನಾಡಿ ಬಳಿಯ ಎಸ್. ಡಿ. ಎಂ. ಮಂಗಳಜ್ಯೋತಿ ಸಂಯುಕ್ತ ಶಾಲೆಯ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕ್ರಿಶ್ಚಿಯನ್ ಪೀಠದ ಮುಖ್ಯಸ್ಥ ಫಾ.ಐವನ್ ಡಿಸೋಜ, ಮಂಗಳೂರಿನ ಎಸ್.ಡಿ.ಎಂ. ವ್ಯವಹಾರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ದೇವರಾಜ್, ವನ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ತರಾದ ಜೀತ್ ಮಿಲನ್ ರೋಚ್, ಎಸ್. ಡಿ. ಎಂ. ಮಂಗಳಜ್ಯೋತಿ ಸಂಯುಕ್ತ ಶಾಲೆಯ ಪ್ರಾಂಶುಪಾಲ ರಮೇಶ್, ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ. ವಿ., ಉಮಾನಾಥ್ ಕೋಟೆಕ್ಕಾರ್, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಕಾಶ್ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.


ಸ್ವಯಂಸೇವಕರಾದ ಕಮಲಾಕ್ಷ ಪೈ, ದಾಮೋದರ್ ನಾಯಕ್, ಡಾ ಕೃಷ್ಣ ಶರಣ್, ಸೌರಾಜ್ ಮಂಗಳೂರು, ಯೋಗೀಶ್ ಕಾಯರ್ತಡ್ಕ, ಅವಿನಾಶ್ ಅಂಚನ್, ಅಚಲ್, ವಿಜೇಶ್ ದೇವಾಡಿಗ, ಮುಕೇಶ್ ಆಳ್ವ, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ನೇತೃತ್ವದಲ್ಲಿ ಮಂಗಳಾ ಕಾಲೇಜ್ ಆಫ್ ನಸಿರ್ಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್ ನ ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕರಾದ ಶ್ರುತಿ ಹಾಗೂ ಸಿಲ್ಫಿಲಿಟಿ ಮಾರ್ಗದರ್ಶನದಲ್ಲಿ ಮಂಗಳ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಂಡ ಎಸ್. ಡಿ. ಎಂ. ಮಂಗಳಜ್ಯೋತಿ ಸಂಯುಕ್ತ ಶಾಲೆಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಸ್ಯಾನಿಟರಿ ಪ್ಯಾಡ್, ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ಸುಮಾರು 3 ಟನ್ ಗಳಷ್ಟು ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.


ಪಚ್ಚನಾಡಿಯಲ್ಲಿ 400 ಗಿಡಗಳ ನಾಟಿ
ಮಂಗಳೂರು ರಾಮಕೃಷ್ಣ ಮಿಷನ್ ಹಾಗೂ ವನ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ವಾಮಂಜೂರಿನ ಪಚ್ಚನಾಡಿಯ ಖಾಲಿ ಜಾಗದಲ್ಲಿ ಸುಮಾರು 400 ಗಿಡಗಳನ್ನು ನೆಡುವ ಕಾರ್ಯಕ್ಕೆ ಉಪಸ್ಥಿತರಿದ್ದ ಗಣ್ಯರು ಚಾಲನೆ ನೀಡಿದರು. ವನ ಚಾರಿಟೇಬಲ್ ಟ್ರಸ್ಟ್ ನ ಜೀತ್ ಮಿಲನ್ ರೋಚ್, ಮಹೇಶ್, ಪುರುಷೋತ್ತಮ್, ಗಣೇಶ್, ಹರಿಣಿ, ಪ್ರಥಮ್ ನೇತೃತ್ವದಲ್ಲಿ ಜೆಪ್ಪು ಸಂತ ಜೋಸೆಫ್ ಸೆಮಿನಾರಿಯ ಸದಸ್ಯರ ತಂಡ ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಜಯೇಶ್, ರಾಕೇಶ್ ಕೃಷ್ಣ ಹಾಗೂ ನಿತ್ಯಾಲ್ ಮಾರ್ಗದರ್ಶನದಲ್ಲಿ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳ ತಂಡದ ಸಹಯೋಗದೊಂದಿಗೆ ಗಿಡಗಳನ್ನು ನೆಡಲಾಯಿತು.