ಜಿಲ್ಲೆ

ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಬಸ್ ಡಿಕ್ಕಿ

ಮಂಗಳೂರು: ನಗರದ ಪಿವಿಎಸ್ ಬಳಿಯ ಎಂಜಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಗುದ್ದಿ ಜಖಂ ಗೊಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.


ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ಬಸ್ ಆಗಿದ್ದು, ಕೇರಳ ಕೆಎಸ್‌ಆರ್‌ಟಿಸಿಯ ಇನ್ನೊಂದು ಬಸ್‌ನೊಂದಿಗೆ ಕಾಂಪಿಟೀಶನ್ ಮಾಡಿಕೊಂಡು ಪಿವಿಎಸ್ ಜಂಕ್ಷನ್ ನಿಂದ ಎಂಜಿ ರಸ್ತೆಗೆ ಚಾಲಕ ನಿರ್ಲಕ್ಷೃ ಮತ್ತು ಅತೀ ವೇಗದ ಚಾಲನೆಯೊಂದಿಗೆ ಬಂದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿಯಾಗಿದ್ದು, ಈ ವೇಳೆ ಪಕ್ಕದಲ್ಲಿದ್ದ ಇನ್ನೊಂದು ದ್ವಿಚಕ್ರ ವಾಹನವೂ ಮಗುಚಿ ಬಿದ್ದಿದೆ. ದ್ವಿಚಕ್ರ ವಾಹನದಲ್ಲಿ ಯಾರೂ ಇಲ್ಲದಿದ್ದುದರಿಂದ ಅನಾಹುತ ಉಂಟಾಗಿಲ್ಲ.


ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸನ್ನು ಬಿಟ್ಟು ಕಳುಹಿಸಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು.