ಮಂಗಳೂರು: ರಾಜ್ಯ ಬಂಧೀಖಾನೆ ಡಿಐಜಿ ಎಂ.ಸೋಮಶೇಖರ್ ಅವರು ಶುಕ್ರವಾರ ಮಂಗಳೂರು ಉಪಕಾರಾಗೃಹಕ್ಕೆ ಭೇಟಿ ನೀಡಿ ಜೈಲು ಅಧಿಕಾರಿ, ಸಿಬ್ಬಂದಿ ಕರ್ತವ್ಯ ಲೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಂಗಳೂರು ನಗರ ಪೊಲೀಸರು ಗುರುವಾರ ಬೆಳಗ್ಗಿನ ಜಾವ ಉಪಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದಾಗ 25 ಮೊಬೈಲ್, ಬ್ಲೂಟುಥ್, ಪೆನ್‌ಡ್ರೈವ್, ಗಾಂಜಾ ಮೊದಲಾದ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಡಿಐಜಿ ಅವರು ಆಗಮಿಸಿ, ತನಿಖೆ ನಡೆಸಿದ್ದಾರೆ.
ಸಬ್ ಜೈಲ್‌ನಲ್ಲಿ ಮೊಬೈಲ್ ಜಾಮರ್, ಕೈಗಾರಿಕಾ ಭದ್ರತಾ ಪಡೆಯವರ ತಪಾಸಣೆ, ಸ್ಕಾೃನರ್, ಜೈಲು ಅಧಿಕಾರಿಗಳ ತಪಾಸಣೆಗಳಿದ್ದರೂ ನಿಷೇಧಿತ ವಸ್ತುಗಳು ಜೈಲ್‌ನೊಳಗೆ ಹೇಗೆ ಹೋಗಿವೆ? ಎನ್ನುವ ಬಗ್ಗೆ ಜೈಲು ಅಧೀಕ್ಷಕರು ಹಾಗೂ ಇತರ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ.
ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ತೆರಳಿದ್ದಾರೆ.ಕೆಲವು ದಿನಗಳ ಹಿಂದೆಯೂ ತಂಡಗಳ ನಡುವೆ ಹೊಡೆದಾಟ ನಡೆದು ನಾಲ್ಕೈದು ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಜೈಲ್‌ನಲ್ಲಿ ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಐಜಿ ಭೇಟಿ ನೀಡಿದ್ದಾರೆ. ಇವೆಲ್ಲವುಗಳ ಬಗ್ಗೆ ಡಿಜಿಗೆ ವರದಿ ನೀಡಲಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೆಲವರು ಅಮಾನತು ಆಗುವ ಸಾಧ್ಯತೆ ಇದೆ.