ಜಿಲ್ಲೆ

ಮಂಗಳೂರಿನಲ್ಲಿ ನ್ಯಾಯಾಂಗ ಸೇವೆಯ ಪರೀಕ್ಷೆ ಬರೆದ ಗರ್ಭಿಣಿ

ಹರೀಶ ಎಂ.

ಮಂಗಳೂರು: ಬೆಂಗಳೂರಿನಲ್ಲಿ ಬರೆಯಬೇಕಾಗಿದ್ದ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಗರ್ಭಿಣಿ ಅಭ್ಯರ್ಥಿಯೊಬ್ಬರು ಮಂಗಳೂರಿನಲ್ಲಿ ಬರೆದು ಗಮನ ಸೆಳೆದಿದ್ದಾರೆ.


ಎಂಟೂವರೆ ತಿಂಗಳ ಗರ್ಭಿಣಿಯಾಗಿರುವ ವಕೀಲೆ ನೇತ್ರಾವತಿ ಅವರು ರಾಜ್ಯ ಹೈಕೋರ್ಟ್‌ನ ವಿಶೇಷ ಅನುಮತಿ ಪಡೆದು ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆಯನ್ನು ಭಾನುವಾರ ನ್ಯಾಯಾಲಯ ಸಂಕೀರ್ಣದ ಕಟ್ಟಡದಲ್ಲಿ ಬರೆದರು.


ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ವಕೀಲೆ ನೇತ್ರಾವತಿ ಅವರು ಈ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು. ಆದರೆ ಗರ್ಭಿಣಿಯಾಗಿದ್ದ ಕಾರಣ ಅವರಿಗೆ ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆಯಲು ಅಸಾಧ್ಯವಾಗಿತ್ತು. ಹಾಗಾಗಿ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡ ಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.


ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಂಬಂಧಿಸಿದ ಹೈಕೋರ್ಟ್ ಸಮಿತಿಯ ಈ ಅರ್ಜಿಯನ್ನು ಪುರಸ್ಕರಿಸಿ ಅಭ್ಯರ್ಥಿಯ ಮನವಿಯಂತೆ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದ್ದರು. ಅದರಂತೆ ನೇತ್ರಾವತಿ ಅವರು ಸುಸೂತ್ರವಾಗಿ ಪರೀಕ್ಷೆ ಬರೆದರು. ಮುಂಜಾಗರುಕತಾ ಕ್ರಮವಾಗಿ ಆಂಬ್ಯುಲೆನ್ಸ್ ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು.