ಮಂಗಳೂರು : ಅಹಿಂಸಾತ್ಮಕ ಹೋರಾಟದಿಂದ ಸ್ವಾತಂತ್ರೃ ಪಡೆದ ಭಾರತ ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದೆ. ಶಾಂತಿ, ಸೌಹಾರ್ದತೆ ನೆಲೆಸಿದರೆ ಮಾತ್ರ ಯಾವುದೇ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಯುವ ರೆಡ್‌ಕ್ರಾಸ್ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಶಾಂತಿ ದಿನದ ಅಂಗವಾಗಿ ಶನಿವಾರ ನಡೆದ ವಾಕಥಾನ್‌ನ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಇಂದು ಎಲ್ಲ ದೇಶಗಳಲ್ಲಿ ಕೋಟ್ಯಾಂತರ ಹಣ ರಕ್ಷಣಾ ವ್ಯವಸ್ಥೆಗಾಗಿ ವಿನಿಯೋಗವಾಗುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಿದರೆ ಅದೇ ಹಣವನ್ನು ಶಿಕ್ಷಣ, ಆರೋಗ್ಯ ಸಹಿತ ಮೂಲಭೂತ ಸೌಕರ್ಯಗಳಿಗೆ ಬಳಸಬಹುದು ಎಂದು ಅವರು ಹೇಳಿದರು.
ರೆಡ್ ಕ್ರಾಸ್ ರಾಜ್ಯ ಶಾಖೆಯ ಖಜಾಂಜಿ ಯತೀಶ್ ಬೈಕಂಪಾಡಿ ಮಾತನಾಡಿ, ಯುವಶಕ್ತಿಯೇ ದೇಶದ ಅತೀ ದೊಡ್ಡ ಶಕ್ತಿ ಹಾಗೂ ಭವಿಷ್ಯದ ಭರವಸೆಯಾಗಿದೆ. ವಿದ್ಯಾರ್ಥಿಗಳು ಧರ್ಮ ಪ್ರೇರಿತ, ರಾಜಕೀಯ ಪ್ರೇರಿತ ವಿಚಾರಗಳಿಂದ ದೂರವಿದ್ದು ಶಾಂತಿದೂತರಾಗಿ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪಿಲಿಕುಳ ಮುಖ್ಯ ವೃತ್ತದಿಂದ ಪ್ರಾದೇಶಿಕ ವಿಜ್ಞಾನ ಕೇಂದ್ರದವರೆಗೆ ನಡೆದ ವಾಕಥಾನ್‌ಗೆ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಚಾಲನೆ ನೀಡಿದರು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ.ಕೆ.,ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಮಂಗಳೂರು ವಿ.ವಿ.ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್., ಯುವ ರೆಡ್‌ಕ್ರಾಸ್‌ನ ನಿರ್ದೇಶಕ ಸಚೇತ್ ಸುವರ್ಣ, ಸಂಪನ್ಮೂಲ ವ್ಯಕ್ತಿ ಮೈಮ್ ರಾಮದಾಸ್ ಉಪಸ್ಥಿತರಿದ್ದರು. ರಾಮಕೃಷ್ಣ ಕಾಲೇಜಿನ ಉಪನ್ಯಾಸಕ ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಪುಂಜಾಲಕಟ್ಟೆ, ಕಾವೂರು, ಬಲ್ಮಠ,ವಾಮದಪದವು, ವಿ.ವಿ.ಕಾಲೇಜು ಹಂಪನಕಟ್ಟೆ, ರೋಶನಿ ನಿಲಯ, ಕೆನರಾ, ಯೇನೆಪೊಯ, ತೃಷಾ,ಪಾದುವ, ಎಸ್‌ಸಿಎಸ್, ಅಲೋಶಿಯಸ್, ರಾಮಕೃಷ್ಣ, ಸೈಂಟ್ ಆಗ್ನೆಸ್, ಗೋವಿಂದದಾಸ್, ಬೆಸೆಂಟ್ ಮಹಿಳಾ, ಬೆಸೆಂಟ್ ಸಂಜೆ ಕಾಲೇಜುಗಳ ಯುವ ರೆಡ್ ಕ್ರಾಸ್ ಘಟಕದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.