ಮಂಗಳೂರು: ರೈತರು ಮತ್ತು ಉತ್ಪಾದಕರಿಗೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳೆದ 10 ವರ್ಷಗಳಿಂದ ನಡೆಸಲಾಗುತ್ತಿರುವ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳ ಈ ಬಾರಿ ಜೂ. 22 ಮತ್ತು 23ರಂದು ಆಯೋಜಿಸಲಾಗಿದೆ.
ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣದಲ್ಲಿ ನಡೆಯಲಿರುವ ಮೇಳದಲ್ಲಿ ಮಳಿಗೆ ತೆರೆಯಲು 72 ಮಂದಿ ಅರ್ಜಿ ಹಾಕಿದ್ದು, 100ರಷ್ಟು ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಮನಗರ, ತಿಪಟೂರು, ಕೋಲಾರ, ಧಾರವಾಡ, ಕುಶಾಲನಗರ, ಮಡಿಕೇರಿ ಮೊದಲಾದ ಕಡೆಗಳಿಂದ ರೈತರು ಹಾಗೂ ಬೆಳೆಗಾರರು ತಮ್ಮ ಹಣ್ಣು ಹಂಪಲು ಮತ್ತು ಹಲಸು ಸೇರಿದಂತೆ, ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ ಎಂದು ಪ್ರಾಧಿಕಾರದ ಆಯುಕ್ತ ಪ್ರವೀಣ್ ನಾಯಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಣ್ಣು ಹಂಪಲುಗಳ ಜತೆಗೆ ಔಷಧೀಯ ಗಿಡಗಳು, ಕಸಿ ಗಿಡಗಳು, ಬೀಜಗಳು, ಸಾವಯವ ಬಳಗದ ವಿವಿಧ ಆಹಾರ ಮತ್ತಿತರ ಪದಾರ್ಥಗಳು, ಹಣ್ಣುಗಳಿಂದ ತಯಾರಿಸಿದ ಖಾದ್ಯಗಳು, ಪಾನೀಯಗಳ ಪ್ರದರ್ಶನವೂ ಇರಲಿದೆ. ಜೂ. 22ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಮೇಳ ನಡೆಯುವ ಅರ್ಬನ್ ಹಾಥ್ ಸುತ್ತಮುತ್ತ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳ ಮೂಲಕವೂ ನೇರವಾಗಿ ಅರ್ಬನ್ ಹಾಥ್‌ವರೆಗೂ ಶುಲ್ಕ ರಹಿತವಾಗಿ ಆಗಮಿಸಿ ಪ್ರದರ್ಶನ ವೀಕ್ಷಣೆ ಹಾಗೂ ಖರೀದಿಗೆ ಅವಕಾಶವಿರಲಿದೆ ಎಂದು ಅವರು ವಿವರಿಸಿದರು.
ಗೋಷ್ಠಿಯಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಅಶೋಕ್ ಕೆ.ಆರ್., ಪ್ರಧಾನ ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ಉಪಸ್ಥಿತರಿದ್ದರು.
ಸರ್ಕಾರಕ್ಕೆ ಪ್ರಸ್ತಾವನೆ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಳಪಟ್ಟಿದ್ದು, ನಿಸರ್ಗಧಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಪಿಎಸ್‌ಇ ಪರೀಕ್ಷೆಯ ಮೂಲಕ ವೃಂದ ಮತ್ತು ನೇಮಕಾತಿ ನಿಯಮದಡಿ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸುಮಾರು 365 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಪಿಲಿಕುಳ ನಿಸರ್ಗಧಾಮಕ್ಕೆ ಸುತ್ತ ಆವರಣಗೋಡೆ ಇಲ್ಲದಿರುವ ಕಾರಣ ಭದ್ರತಾ ಸಿಬ್ಬಂದಿ ಅತೀ ಅಗತ್ಯವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವೀಣ್ ನಾಯಕ್ ತಿಳಿಸಿದರು.