ಮಂಗಳೂರು: ಸೌತ್ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ವತಿಯಿಂದ ಫಿಸಿಯೋಥೆರಪಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗಾಗಿ ‘ಕನೆಕ್ಟ್ ಟು ಅನ್ಲಾಕ್ ದಿ ಪೊಟೆನ್ಶಿಯಲ್ ಆಫ್ ಫಿಸಿಯೋಥೆರಪಿ’ ವಿಷಯದಲ್ಲಿ ಸೆ.8 ಮತ್ತು 9 ರಂದು ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಮಂಗಳೂರು ಫಿಸಿಯೋಕಾನ್ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಸಮ್ಮೇಳನವನ್ನು ಸೆ.8 ರಂದು ಬೆಳಗ್ಗೆ 10.30 ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಉದ್ಘಾಟಿಸುವರು. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮುಖ್ಯ ಭಾಷಣ ನಡೆಸುವರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ರುದ್ರಪ್ಪ ಪಾಟೀಲ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಕುಲಾಧಿಪತಿ, ಡಾ.ಎಚ್.ಎಸ್.ಬಲ್ಲಾಳ್ ಮುಂತಾದವರು ಮುಖ್ಯ ಅತಿಥಿಗಳಾಗಿರುವರು ಎಂದು ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಆಲಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ಸೆ.9 ರಂದು ಮಧ್ಯಾಹ್ನ 2.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಸುಜಾತಾ ರಾಥೋಡ್ ಭಾಗವಹಿಸುವರು ಎಂದು ಅವರು ಹೇಳಿದರು.
* ಸೆ.5 ರಿಂದ ವಾರಪೂರ್ತಿ ಕಾರ್ಯಕ್ರಮ
ಸಮ್ಮೇಳನದ ಅಂಗವಾಗಿ ಸೆ.5 ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಪೂರಕ ಕಾರ್ಯಕ್ರಮಗಳು ನಡೆಯಲಿವೆ. ಸೆ.5 ರಂದು ನಾಟೆಕಲ್ ಕಣಚೂರು ಫಿಸಿಯೋಥೆರಪಿ ಕಾಲೇಜಿನಲ್ಲಿ ಬೆಳಗ್ಗೆ 10 ಕ್ಕೆ ರಕ್ತದಾನ ಶಿಬಿರ, 6 ರಂದು ಬೆಳಗ್ಗೆ 10 ಕ್ಕೆ ಮಂಗಳೂರು ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, 7 ರಂದು ಬೆಳಗ್ಗೆ 9 ರಿಂದ ಕಾವೂರು ಫಿಸಿಯೋಥೆರಪಿ ಕಾಲೇಜಿನಲ್ಲಿ ಸಮ್ಮೇಳನ ಪೂರ್ವ ಕಾರ್ಯಾಗಾರ ನಡೆಯುವುದು. ಎರಡನೇ ಪೂರ್ವ ಸಮ್ಮೇಳನ ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಫಿಸಿಯೋಥೆರಪಿ ವಿಭಾಗದಲ್ಲಿ, ಮೂರನೇ ಪೂರ್ವ ಸಮ್ಮೇಳನವು ದೇರಳಕಟ್ಟೆಯ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಾಲ್ಕನೇ ಪೂರ್ವ ಸಮ್ಮೇಳನ ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಫಿಸಿಯೋ ಥೆರಪಿ ವಿಭಾಗ, 5 ನೇ ಪಪೂರ್ವ ಸಮ್ಮೇಳನವು ಕೆನರಾ ವಿಕಾಸ್ ಫಿಸಿಯೋ ಥೆರಪಿ ಕಾಲೇಜು ಹಾಗೂ 6 ನೇ ಪೂರ್ವ ಸಮ್ಮೇಳನವು ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ನಡೆಯುವುದು ಎಂದು ಸಂಘಟನಾ ಸಮಿತಿಯ ಡಾ.ವೈಶಾಲಿ ವಿವರಿಸಿದರು.
ಸೆ.7 ರಂದು ಪೂರ್ವಭಾವಿ ಸುತ್ತಿನ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಮಂಗಳೂರು ಯೇನೆಪೋಯ ವಿಶ್ವವಿದ್ಯಾಲಯದ ಯೆಂಡೂರೆನ್ಸ್ ವಲಯದಲ್ಲಿ ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಸೆ.9 ರಂದು ಸಂಜೆ 6 ಕ್ಕೆ ಮಂಗಳೂರು ಸೂರ್ಯ ವುಡ್ಸ್ ಕನ್ವೆನ್ಶನ್ ಸೆಂಟರ್ ನಲ್ಲಿ ಸಾಂಸ್ಕೃತಿಕ ಉತ್ಸವ, ಔತಣಕೂಟ, ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಕಾರ್ಯದರ್ಶಿ ಡಾ.ಅಭಿಲಾಷ್, ಕೋಶಾಧಿಕಾರಿ ಡಾ.ವಿಜಯ್, ಡಾ.ಎಲ್ಡೋ ಪೀಟರ್ ಉಪಸ್ಥಿತರಿದರದು.