ಜಿಲ್ಲೆ

ಮಂಗಳೂರು ಉತ್ತರ ಚಾಂಪಿಯನ್ : ಜಿಲ್ಲಾಮಟ್ಟದ ಖೋ ಖೋ ಟೂರ್ನಿಯಲ್ಲಿ 4 ವಿಭಾಗದಲ್ಲೂ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ದ.ಕ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಆಶ್ರಯದಲ್ಲಿ ಬಿಳಿನೆಲೆ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ 14ರ, 17ರ ವಯೋಮಾನದ ಬಾಲಕ ಬಾಲಕಿಯರ ಖೋ ಖೋ ಟೂರ್ನಿಯ 4 ವಿಭಾಗದಲ್ಲೂ ಮಂಗಳೂರು ಉತ್ತರ ತಾಲೂಕು ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಜಿದ್ದಾನಿಂದ ಕೂಡಿದ ಅಂತಿಮ ಹಣಾಹಣಿಯಲ್ಲಿ ಮಂಗಳೂರು ಉತ್ತರ ತಂಡ 14ರ ವಯೋಮಾನದ ಬಾಲಕ ಬಾಲಕಿಯರ ಎರಡು ವಿಭಾಗ ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.

4ರಲ್ಲೂ ಚಾಂಪಿಯನ್: ಜಿದ್ದಾಜಿದ್ದಿನಿಂದ ಕೂಡಿದ 14 ವಯೋಮಾನದ ಬಾಲಕರ ವಿಭಾಗದಲ್ಲಿ ಮಂಗಳೂರು ಉತ್ತರ ಪ್ರಥಮ ಸ್ಥಾನಿಯಾದರೆ, ಪುತ್ತೂರು ತಾಲೂಕು ತಂಡ ದ್ವಿತೀಯ ಸ್ಥಾನ ಪಡೆಯಿತು. ತೀವ್ರ ಹಣಾಹಣಿಯ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಉತ್ತರ ಚಾಂಪಿಯನ್ ಆದರೆ ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನಿಯಾಯಿತು. ಪೈಪೋಟಿಯಿಂದ ಕೂಡಿದ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮಂಗಳೂರು ಉತ್ತರ ಪ್ರಥಮ ಸ್ಥಾನಿಯಾದರೆ, ಪುತ್ತೂರು ತಾಲೂಕು ತಂಡ ದ್ವಿತೀಯ ಸ್ಥಾನ ಪಡೆಯಿತು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಉತ್ತರ ಚಾಂಪಿಯನ್ ಆದರೆ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿತು.

ವೈಯಕ್ತಿಕ ಬಹುಮಾನ:

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ ಮೋಕ್ಷಿತ್ ಆರ್.ಗೌಡ, ಉತ್ತಮ ಹಿಡಿತಗಾರ ಅರ್ಫಾಜ್, ಉತ್ತಮ ಓಟಗಾರ ಮಯಾನ್ಸ್ ವೈಯಕ್ತಿಕ ಬಹುಮಾನ ಪಡೆದರು. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ್ತಿ ಕನ್ನಿಕಾ ಶೆಟ್ಟಿ, ಉತ್ತಮ ಹಿಡಿತಗಾರ್ತಿ ಹಲೀಫಾ, ಉತ್ತಮ ಓಟಗಾರ್ತಿ ಜಾಹ್ನವಿ ವೈಯಕ್ತಿಕ ಬಹುಮಾನ ಗಳಿಸಿದರು. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ ವರ್ಷಿತ್, ಉತ್ತಮ ಹಿಡಿತಗಾರ ಸಾದ್, ಉತ್ತಮ ಓಟಗಾರ ಆಕಾಶ್ ವೈಯಕ್ತಿಕ ಬಹುಮಾನಕ್ಕೆ ಭಾಜನರಾದರು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ್ತಿ ಶೈಲಿ, ಉತ್ತಮ ಹಿಡಿತಗಾರ್ತಿ ಯೋಗ್ಯ, ಉತ್ತಮ ಓಟಗಾರ್ತಿ ಜಯಲಕ್ಷ್ಮೀ ವೈಯಕ್ತಿಕ ಬಹುಮಾನ ಪಡೆದರು.

ಬಹುಮಾನ ವಿತರಣೆ

ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಉಪವಲಯ ಅರಣ್ಯಾಧಿಕಾರಿ ಅಪೂರ್ವಾ ಅಚ್ರಪ್ಪಾಡಿ, ನಿವೃತ್ತ ಮುಖ್ಯಶಿಕ್ಷಕ ಗೋಪಾಲಕೃಷ್ಣ ಬಿ., ಹಿರಿಯಣ್ಣ ಗೌಡ, ಕ್ರೀಡಾ ಸಂಯೋಜಕ ವಿನಯ ಕೆ., ಗೋಪಾಲಕೃಷ್ಣ ಪ್ರೌಢಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್, ವೇದವ್ಯಾಸ ವಿದ್ಯಾಲಯದ ಮುಖ್ಯ ಶಿಕ್ಷಕ ಪ್ರಶಾಂತ್ ಬಿ. ಮತ್ತಿತರರಿದ್ದರು.