ಮಂಗಳೂರು: ಸುಮಾರು 300 ವರ್ಷಗಳ ಬಳಿಕ ನೀರುಮಾರ್ಗ ಶ್ರೀ ಕ್ಷೇತ್ರ ಪೆದಮಲೆ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಾಭಿಷೇಕ ಫೆ.18ರಿಂದ 22ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಭಾನುವಾರ ಆ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿದ್ದರು. ದೈವದ ಕಾರ್ಯ ದೈವೇಚ್ಛೆಯಂತೆಯೇ ನೆರವೇರುತ್ತದೆ. ನಾವೆಲ್ಲರೂ ಇಲ್ಲಿ ನಿಮಿತ್ತ ಮಾತ್ರ. ಗ್ರಾಮದ ದೈವ ಎದ್ದುನಿಂತಿದೆ ಎಂದರೆ ಗ್ರಾಮ ಅಭಿವೃದ್ಧಿಯನ್ನು ಹೊಂದುತ್ತದೆ ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಅತಿಥಿಯಾಗಿದ್ದರು. ಈಗಾಗಲೇ ದೈವಸ್ಥಾನದ ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದರು.
ಟ್ರಸ್ಟ್ ಅಧ್ಯಕ್ಷ ಗಿರಿಧರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಮನಪಾ ಸದಸ್ಯ ಭಾಸ್ಕರ್ ಕೆ., ಗಟ್ಟಿ ಸಮಾಜದ ಮುಖಂಡ ಹರಿಶ್ಚಂದ್ರ ಗಟ್ಟಿ, ಭಟ್ರಕೋಡಿ ವೆಂಕಟಕೃಷ್ಣ ಭಟ್, ಸೀತಾರಾಮ್ ಎ.ಮೊದಲಾದವರು ಉಪಸ್ಥಿತರಿದ್ದರು. ಆನಂದ್ ಸರಿಪಲ್ಲ ವಂದಿಸಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
* ಶ್ರೀ ಕ್ಷೇತ್ರದ ಪುನರ್ ಪ್ರತಿಷ್ಠೆ
ಶ್ರೀ ವಾಜಿಲ್ಲಾಯ- ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.21ರಂದು ಬೆಳಗ್ಗೆ 8.28ಕ್ಕೆ ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ, ಮಹಿಷಂತಾಯ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಮಹಿಷಂತಾಯ ಹಾಗೂ ಶ್ರೀ ವಾಜಿಲ್ಲಾಯ ದೈವದ ನೇಮೋತ್ಸವ ನಡೆಯಲಿದೆ. ಫೆ. 22 ರಂದು ರಾತ್ರಿ 7ರಿಂದ ಧೂಮಾವತಿ ಬಂಟ ದೈವದ ನೇಮೋತ್ಸವ ಜರುಗಲಿದೆ.
ಫೆ.16ರಂದು ಬೆಳಗ್ಗೆ 10ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಕುಡುಪು ಶ್ರೀ ಆನಂತ ಪದ್ಮನಾಭ ದೇವಸ್ಥಾನದಿಂದ ಹೊರೆಕಾಣಿಕೆ ಹೊರಡಲಿದೆ. ಫೆ.18 ಮಧ್ಯಾಹ್ನ 3 ಗಂಟೆಯಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಪೆದಮಲೆ ಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿ ಸನ್ಮಾನ, ಆಲಯ ಪ್ರತಿಗ್ರಹ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮತ್ತು ನೂತನ ಮೂಗಮೂರ್ತಿ, ಉಯ್ಯಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ನಡೆಯಲಿದೆ.
ಫೆ.19ರಂದು ಬೆಳಗ್ಗೆ 8.30ಕ್ಕೆ ಶ್ರೀ ದೈವಗಳ ಚಾವಡಿಯ ಪ್ರವೇಶ ಪ್ರತಿಷ್ಠೆ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ ಜರುಗಲಿದೆ. ಸಂಜೆ 6ಕ್ಕೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಮತ್ತು ವಾಸ್ತು ಬಲಿ ಜರುಗಲಿದೆ. 18ರಿಂದ 21ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.