ಜಿಲ್ಲೆ

ಮಂಗಳೂರು ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ

ಹರೀಶ ಎಂ.

ಮಂಗಳೂರು: ಅದಾನಿ ಫೌಂಡೇಶನ್ ಸುಪೋಶನ್ ಯೋಜನೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಅಂಗನವಾಡಿಗಳ ಸಹಕಾರದಲ್ಲಿ ನ.15ರಿಂದ 21ರ ತನಕ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ ಆಚರಿಸಲಾಯಿತು.

ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ, ಮಗುವಿನ ಆರೈಕೆ, ಮಗುವನ್ನು ಬಟ್ಟೆಯಲ್ಲಿ ಸುತ್ತುವ ಕ್ರಮ, ಹಾಲುನಿಸುವ ಕ್ರಮ, ಅದರ ಪ್ರಯೋಜನ, ಮಗುವಿಗೆ ಮಸಾಜ್, ತಾಯಿಯ ಎದೆ ಹಾಲಿನ ಮಹತ್ವ, ಶುಚಿತ್ವ, ಕಬ್ಬಿಣಾಂಶ ಮಾತ್ರೆಯ ಉಪಯೋಗ, ಪೌಷ್ಟಿಕಾಂಶ ಆಹಾರ ಹಾಗೂ ಅದಕ್ಕೆ ಸಂಬಂಧಪಟ್ಟ ಹಲವು ವಿಚಾರಗಳ ಬಗ್ಗೆ ಸುಪೋಷನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ, ಸಂಗಿನಿಗಳಾದ ಚೈತ್ರಾ ಹಾಗು ರೋಶನಿ ಮಾಹಿತಿ ನೀಡಿದರು.

162 ನವಜಾತ ಶಿಶುಗಳಿಗೆ ಅದಾನಿ ಫೌಂಡೇಶನ್ ವತಿಯಿಂದ ಕಿಟ್‌ಗಳನ್ನು ವಿತರಿಸಲಾಯಿತು. ಪಂಜಿಮೊಗರು ಮಂಜೊಟ್ಟಿ ಅಂಗನವಾಡಿ ಕೇಂದ್ರ, ಜ್ಯೋತಿನಗರ ಕುಂಜತ್ತಬೈಲ್, ಸೂರಿಂಜೆ, ಬೈಕಂಪಾಡಿ, ಐಕಳ, ಕೆಂಚಳಗುಡ್ಡೆ, ತೆಂಕಳ ಎಕ್ಕೂರು, ಪದವು, ಚೇಳ್ಯಾರು, ಪದವು ಮೊದಲಾದ ಅಂಗನವಾಡಿಗಳಲ್ಲಿ ಮಾಹಿತಿ ಶಿಬಿರ ಜರುಗಿತು.

ಅಂಗನವಾಡಿ ಶಿಕ್ಷಕಿಯರು, ಗ್ರಾ.ಪಂ. ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಸಂಗಿನಿಯರು ಮೊದಲಾದವರು ಪಾಲ್ಗೊಂಡಿದ್ದರು.