ಜಿಲ್ಲೆ

ಮಂಗಳೂರಿನ ಹೊಸ ಸೆಂಟ್ರಲ್ ಮಾರ್ಕೆಟ್‌ನಲ್ಲಿ 9 ಬೀಫ್ ಸ್ಟಾಲ್!

| ಶ್ರವಣ್ ಕುಮಾರ್ ನಾಳ, ಮಂಗಳೂರು
ಗೋಹತ್ಯಾ ನಿಷೇಧ ಕಾಯ್ದೆಯನ್ನು ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನಡುವೆಯೇ ಅದೇ ಪಕ್ಷದ ಆಡಳಿತವಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್‌ಗೆ ಅವಕಾಶ ನೀಡುವ ಯೋಜನೆ ರೂಪಿಸಲಾಗಿದೆ.

114 ಕೋಟಿ ರೂ. ವೆಚ್ಚದಲ್ಲಿ ಹೊಸ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಮಾಸ್ಟರ್ ಪ್ಲಾನ್ ರಚಿಸಿದ್ದು, ಆತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೆಂಟ್ರಲ್ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ಲೋವರ್ ಗ್ರೌಂಡ್‌ನಲ್ಲಿ 9 ಬೀಫ್ ಸ್ಟಾಲ್ ಇರಲಿದೆ.

ಪಾಲಿಕೆಯಿಂದಲೇ ಏಲಂ!: ಸೆಂಟ್ರಲ್ ಮಾರುಕಟ್ಟೆಯನ್ನು ಆಧುನೀಕರಿಸಬೇಕಾದ ಕಾರಣ ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕೆ 2016 ಜೂ.29ರಂದು ಮಹಾನಗರ ಪಾಲಿಕೆ ಸಭೆ ನಿರ್ಣಯಿಸಿತ್ತು. ಬಳಿಕ ಸ್ಮಾರ್ಟ್ ಸಿಟಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. 2018 ಸೆ. 22ರಂದು ಉನ್ನತಾಧಿಕಾರ ಕಮಿಟಿ ಸಭೆಯಲ್ಲಿ ಮಂಜೂರಾತಿ ನೀಡಲಾಗಿತ್ತು. ಬಳಿಕ ಟೆಂಡರ್ ಪ್ರಕ್ರಿಯೆಯೂ ಮುಗಿದು, ಸರ್ಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ)ವನ್ನೂ ಅಂತಿಮಗೊಳಿಸಲಾಗಿತ್ತು. ಒಟ್ಟು 3.61 ಎಕರೆ ಸ್ಥಳದಲ್ಲಿ ಪಿಪಿಪಿ ಮಾದರಿಯಲ್ಲಿ ಒಟ್ಟು 114 ಕೋಟಿ ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಸ್ಮಾರ್ಟ್ ಸಿಟಿ ಉದ್ದೇಶಿಸಿದೆ.

ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲೇ ಸ್ಮಾರ್ಟ್ ಸಿಟಿ ಸಂಸ್ಥೆ ಈ ಯೋಜನೆಯ ಮಾಸ್ಟರ್ ಪ್ಲಾನ್ ರಚಿಸಿದ್ದು, ಯೋಜನೆಯಲ್ಲಿ ಚಿಕನ್, ಮಟನ್, ಫಿಶ್ ಸ್ಟಾಲ್‌ಗಳ ಜತೆಗೆ 9 ಬೀಫ್ ಸ್ಟಾಲ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಮಾರುಕಟ್ಟೆ ನಿರ್ಮಾಣ ಪೂರ್ಣಗೊಂಡ ನಂತರ ಮಂಗಳೂರು ಮಹಾನಗರ ಪಾಲಿಕೆಯಿಂದಲೇ ಏಲಂ ಪ್ರಕ್ರಿಯೆ ನಡೆಯಲಿದೆ.

6 ತಿಂಗಳಿಂದ ಕುದ್ರೋಳಿ ಕಸಾಯಿಖಾನೆ ಬಂದ್!: ಕಳೆದ 6 ತಿಂಗಳಿನಿಂದ ಮಂಗಳೂರು ಮಹಾನಗರ ಪಾಲಿಕೆ ಅಧೀನದ ಕುದ್ರೋಳಿ ಕಸಾಯಿಖಾನೆ ಬಂದ್ ಆಗಿದೆ. ಆದರೆ ಕುದ್ರೋಳಿ ಸುತ್ತಮುತ್ತಲಿನ ಮನೆಗಳಲ್ಲಿ ಎಗ್ಗಿಲ್ಲದೆ ಗೋವಧೆ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ನಗರದ ಬಹುತೇಕ ಹೋಟೇಲ್‌ಗಳಿಗೆ ಬೆಳಗ್ಗಿನ ಜಾವ ಗೋಮಾಂಸ ಇದೇ ಪ್ರದೇಶದಿಂದ ಅಕ್ರಮವಾಗಿ ಸಾಗಾಟವಾಗುತ್ತದೆ. ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಹಿಂದು ಸಂಘಟನೆಗಳ ಆರೋಪ. ಜಾನುವಾರು ಎಂದರೆ 13 ವರ್ಷಗಳ ಒಳಗಿನ ಆಕಳು, ಆಕಳ ಕರು, ಎತ್ತು, ಗೂಳಿ, ಎಮ್ಮೆ ಅಥವಾ ಕೋಣ ಎಂದು ಹೊಸ ಕಾನೂನಿನಂತೆ ಪರಿಗಣಿಸಲಾಗುತ್ತದೆ. ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಗೋ ಸಾಗಣೆ ಸಂದರ್ಭ ಅಥವಾ ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿ ಹಾಕಿದಲ್ಲಿ ದಾಳಿ, ಪರಿಶೀಲನೆ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆಯುವ ಅಧಿಕಾರವಿದೆ. ಆದರೆ ಈವರೆಗೆ ಯಾವುದೇ ಪೊಲೀಸರು ಕುದ್ರೋಳಿ ಭಾಗದಲ್ಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕುದ್ರೋಳಿ ಹೊರತುಪಡಿಸಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಲವೆಡೆ ಅಕ್ರಮ ಕಸಾಯಿಖಾನೆಗಳ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದಿದೆ.

ಮಂಗಳೂರು ಸ್ಮಾರ್ಟ್ ಸಿಟಿಯಿಂದ ನಿರ್ಮಾಣಗೊಳ್ಳುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್‌ಗೆ ಅವಕಾಶ ನೀಡುವ ಯೋಜನೆಗೆ ನಮ್ಮ ವಿರೋಧ ಇದೆ. ಈ ಸ್ಟಾಲ್‌ಗಳನ್ನು ರದ್ದುಪಡಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಹಾಗೂ ಸ್ಮಾರ್ಟ್ ಸಿಟಿಗೆ ಮನವಿ ನೀಡಲಾಗುವುದು. ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟದ ಜತೆಗೆ ನಾವು ನಮ್ಮದೇ ಶೈಲಿಯಲ್ಲಿ ಹೋರಾಟಕ್ಕೆ ಕಾರ್ಯ ಯೋಜನೆ ರೂಪಿಸಬೇಕಾಗುತ್ತದೆ.
| ಶರಣ್ ಪಂಪ್‌ವೆಲ್, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ, ವಿಶ್ವ ಹಿಂದು ಪರಿಷತ್

ಈ ಹಿಂದೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ಇದ್ದ ಎಲ್ಲ ಅಂಗಡಿಗಳನ್ನು ಹೊಸ ಮಾರುಕಟ್ಟೆಯಲ್ಲಿ ಸೇರಿಸಲು ಸೂಚಿಸಲಾಗಿದೆ. ಆದರೆ ಅದರಲ್ಲಿರುವ ಬೀಫ್ ಸ್ಟಾಲ್‌ಗಳು ಇರುವ ಬಗ್ಗೆ ಮಾಹಿತಿ ಇಲ್ಲ. ಮಾರುಕಟ್ಟೆ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿಯಿಂದ ಮಾಸ್ಟರ್ ಪ್ಲಾನ್ ರಚಿಸಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗುವುದು.
| ಜಯಾನಂದ ಅಂಚನ್, ಮೇಯರ್, ಮಂಗಳೂರು