ಮಂಗಳೂರು: ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ. ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನ ಪರಂಪರೆಯನ್ನು ಒಂದೇ ಸುತ್ತದಡಿ ತಂದು ಅದು ಬೆಳಗುತ್ತದೆ. ಇದರ ಬೆಳವಣಿಗೆಗೆ ಎಲ್ಲರ ಸಹಯೋಗ ಅಗತ್ಯ ಎಂದು ನವಭಾರತ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಪಿ.ವಾಮನ ಶೆಣೈ ಹೇಳಿದರು.
ಸಂಘನಿಕೇತನದ ಸುಜ್ಞಾನ ಸಭಾಭವನದಲ್ಲಿ ಶನಿವಾರ ನಡೆದ ನವಭಾರತ ಎಜ್ಯುಕೇಶನ್ ಸೊಸೈಟಿಯ ನವಭಾರತ ಯಕ್ಷಗಾನ ಅಕಾಡೆಮಿಯ ದಶಮಾನೋತ್ಸವದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನವಭಾರತ ಎಜ್ಯುಕೇಶನ್ ಸೊಸೈಟಿಯಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಮಧೂಸೂದನ ಅಯಾರ್ ಮಾತನಾಡಿ, ಎಲ್ಲಾ ವರ್ಗಗಳವರನ್ನೂ ತಲುಪುವ ಸಿ.ಎ. ತರಗತಿಗಳು, ಯಕ್ಷಗಾನ, ವೇದಿಕ್ ಮ್ಯಾಥ್ಸ್, ಯೋಗ ಇತ್ಯಾದಿಗಳನ್ನು ಕಲಿಸುವ ವ್ಯವಸ್ಥೆ ಇದೆ ಎಂದರು.
ಜೆ. ವಿ.ಶೆಟ್ಟಿ, ಸೊಸೈಟಿ ಸದಸ್ಯ ಆರ್.ಎಂ. ಬಸವರಾಜು, ಅಂತಾರಾಷ್ಟ್ರೀಯ ಈಜುಪಟು ನಾಗರಾಜ ಖಾರ್ವಿ, ಕಿರಣ್ ಕುಮಾರ್ ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನವ ಭಾರತ ಯಕ್ಷಗಾನ ಅಕಾಡೆಮಿಯ ಹಿರಿಯ ಸದಸ್ಯೆ ಹಾಗೂ ಕಲಾವಿದೆ ಸಾವಿತ್ರಿ ಯಸ್. ಮಲ್ಯರನ್ನು ಸನ್ಮಾನಿಸಲಾಯಿತು. ಭಾರತೀ ಪ್ರಮೋದ್ ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರು. ದಿನೇಶ್ ಕುಮಾರ್ ವಂದಿಸಿದರು. ಬಳಿಕ ನವ ಭಾರತ ಯಕ್ಷಗಾನ ಅಕಾಡೆಮಿಯ ಶಿಕ್ಷಣಾರ್ಥಿ ವಿದ್ಯಾರ್ಥಿಗಳಿಂದ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜರಗಿತು.