ಜಿಲ್ಲೆ

ಸಾಹಿತ್ಯದ ಸಾಧ್ಯತೆಗಳ ರಂಗಪ್ರಸ್ತುತಿ ಶ್ಲಾಘನೀಯ ನೃತ್ಯಾಮೃತ - 10 ಕಾರ್ಯಕ್ರಮದಲ್ಲಿ ಕ್ಯಾ.ಗಣೇಶ್ ಕಾರ್ಣಿಕ್

ಮಂಗಳೂರು: ಭರತನಾಟ್ಯದಂತಹ ಕಲೆ ಭಾವನೆಗಳ ಮೂಲಕ ವಿಚಾರವನ್ನು ಪ್ರೇಕ್ಷಕರಿಗೆ ಸುಲಭವಾಗಿ ಮುಟ್ಟಿಸುವ ಕೆಲಸವನ್ನು ಮಾಡುತ್ತದೆ. ಈ ನಿಟ್ಟಿನಲ್ಲಿ ನಮಗೆ ಶ್ರೀಕೃಷ್ಣನನ್ನು ಅಂತರಂಗದಲ್ಲಿ ಕಾಣಿಸುವಲ್ಲಿ ನಾಟ್ಯಾರಾಧನಾ ಭಾವ ನವನವೀನ ಯಶಸ್ವಿಯಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ ಸಭಾಂಗಣದಲ್ಲಿ ಶನಿವಾರ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆದ ನೃತ್ಯಾಮೃತ -10 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೃತ್ಯ ಕಲಾವಿದೆ, ಸಂಘಟಕಿ ರಾಧಿಕಾ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಒಂದೇ ಹಾಡಿಗೆ 5 ವಿಧದ ನೃತ್ಯ ಪ್ರಸ್ತುತಿಯಂತಹ ಅಧ್ಯಯನಾತ್ಮಕ ಕಾರ್ಯಕ್ರಮ ಮಂಗಳೂರಿಗೆ ಮಾತ್ರ ಸೀಮಿತವಾಗದೆ ನಾಡಿನೆಲ್ಲಡೆ ವೇದಿಕೆ ಪಡೆಯಬೇಕು. ನೃತ್ಯ ಕಲಿಯುವ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ವೀಕ್ಷಿಸುವುದರಿಂದ ಕಲಾ ವಿಸ್ತಾರದ ಅರಿವನ್ನು ಸುಲಭವಾಗಿ ಗ್ರಹಿಸಲು ಸಾಧ್ಯ ಎಂದರು.

ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಬಿ. ಸುಮಂತ ಕುಮಾರ್ ಉದ್ಘಾಟಿಸಿದರು. ಹಿರಿಯ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್, ಎಲ್.ಐ.ಸಿ. ಮಂಗಳೂರಿನ ವೃತ್ತ ಹಿರಿಯ ಶಾಖಾಧಿಕಾರಿ ಎಲ್.ದಿವಾಕರ್, ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳು, ಕಾಟಿಪಳ್ಳದ ಅಧ್ಯಕ್ಷ ಪಿ.ದಯಾಕರ್, ಎನ್.ಐ.ಟಿ.ಕೆ ಸುರತ್ಕಲ್ ನ ಪೊ.ಡಾ. ಎ. ನಿತ್ಯಾನಂದ ಶೆಟ್ಟಿ, ನಾಟ್ಯಾಂಜಲಿ ಕಲಾ ಅಕಾಡಮಿಯ ಗುರು ವಿ.ಚಂದ್ರಶೇಖರ ನಾವಡ ಸುರತ್ಕಲ್, ನಾಟ್ಯ ನಿಕೇತನ ಕೊಲ್ಯದ ಗುರು ವಿ.ರಾಜಶ್ರೀ ಉಳ್ಳಾಲ್ ,ಭರತಾಂಜಲಿ , ಕೊಟ್ಟಾರದ ನಿರ್ದೇಶಕಿ ವಿ.ಪ್ರತಿಮಾ ಶ್ರೀಧರ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ವಿ. ಸತ್ಯನುಶ್ರೀ ಗುರುರಾಜ್ ಮುಖ್ಯ ಅಭ್ಯಾಗತರಾಗಿದ್ದರು. ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಸ್ಟಿ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು.

ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದರು. ಸಂಸ್ಥೆಯ ನಿರ್ದೇಶಕಿ ವಿ.ಸುಮಂಗಲಾ ರತ್ನಾಕರ್ ಸ್ವಾಗತಿಸಿದರು. ವಿ. ಮಲ್ಲಿಕಾ ವೇಣುಗೋಪಾಲ್ ವಂದಿಸಿದರು. ವಿ. ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.

ಭಾವ ನವನವೀನ ಕಾರ್ಯಕ್ರದಲ್ಲಿ ಗುರು ವಿ. ಸುಮಂಗಲಾ ರತ್ನಾಕರ್ ನಿರ್ದೇಶನದಲ್ಲಿ ಮತ್ತು ನಟುವಾಂಗಂನಲ್ಲಿ ಪುರಂದರದಾಸರ ಪಿಳ್ಳಂಗೋವಿಯದ ಸಾಹಿತ್ಯಕ್ಕೆ ವಿ. ಸುಮಂಗಲಾ ರತ್ನಾಕರ್ ( ಯಶೋದೆ) , ವಿ.ಅನು ಧೀರಜ್ ( ಮುಗ್ಧ ಕಂದ), ಧರಿತ್ರಿ ಭಿಡೆ ( ಪ್ರೇಮಿ) , ವೃಂದಾ ರಾವ್ ( ಆಧ್ಯಾತ್ಮಿಕ ) ಹಾಗೂ ಅನಂತಕೃಷ್ಣ ( ಗೆಳೆಯ ಗೊಲ್ಲ) ನೃತ್ಯ ಪ್ರಸ್ತುತಿ ನೀಡಿದರು. ಹಾಡುಗಾರಿಕೆಯಲ್ಲಿ ವಿ.ರೋಹಿತ್ ಭಟ್ ಉಪ್ಪೂರ್ ಬೆಂಗಳೂರು, ಮೃದಂಗದಲ್ಲಿ ವಿ.ಕಾರ್ತಿಕ್ ವೈಧಾತ್ರಿ ಬೆಂಗಳೂರು, ಕೊಳಲಿನಲ್ಲಿ ವಿ.ರಾಕೇಶ್ ದತ್ತ್ ಬೆಂಗಳೂರು ಸಹಕರಿಸಿದ್ದರು.