ಜಿಲ್ಲೆ

ಪೊಲೀಸ್ ಕಾನ್‌ಸ್ಟೇಬಲ್‌ಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನ

ಹರೀಶ ಎಂ.

ಮಂಗಳೂರು: ಉರ್ವ ಠಾಣೆಯ ಕಾನ್‌ಸ್ಟೇಬಲ್ ವೆಂಕಟೇಶ್ ಅವರನ್ನು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯನ್ನೊಡ್ಡಿ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣ ಉರ್ವ ಠಾಣೆಯಲ್ಲಿ ದಾಖಲಾಗಿದೆ.


ಸೆ.29ರಂದು ವೆಂಕಟೇಶ್ ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್ ಕಾನ್‌ಸ್ಟೇಬಲ್ ಪುಷ್ಪರಾಜ್ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್ ಅವರು ಈ ವಿಚಾರವನ್ನು ಬೀಟ್ ಕರ್ತವ್ಯ ಸಿಬಂದಿ ಬಾಳೆಗೌಡ ಮೊಕಾಶಿ ಮತ್ತು ಎಚ್.ಜಿ. ರೋಹಿದಾಸ್ ಅವರಿಗೆ ತಿಳಿಸಿದ್ದು, ತಾನು ಬೈಕ್‌ನಲ್ಲಿ ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. 10.40ರ ವೇಳೆಗೆ ಸ್ಥಳಕ್ಕೆ ತಲುಪಿದಾಗ ಪಿಜಿಯ ಎದುರುಗಡೆ 7-8 ಮಂದಿ ಯುವಕರು ಬೈದಾಡುತ್ತಾ ಪಿಜಿಯ ಕಿಟಕಿಯ ಗಾಜಿಗೆ ಕಲ್ಲಿನಿಂದ ಹೊಡಿಯುತಿದ್ದರು. ಸಮವಸದಲ್ಲಿದ್ದ ವೆಂಕಟೇಶ್ ಅವರು ಅಲ್ಲಿಗೆ ತಲುಪುತ್ತಿದ್ದಂತೆ ಆ ಯುವಕರ ಗುಂಪು ಅವರಿದ್ದಲ್ಲಿಗೆ ಬಂದು ಅವಾಚ್ಯ ಶಬ್ಧಗಳಿಂದ ಬೈದು ವಾಪಾಸ್ ಜೀವಂತ ಹೋಗಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.


ಯುವಕರ ಗುಂಪಿನಲ್ಲಿದ್ದ ವೆಂಕಟೇಶ್ ಅವರಿಗೆ ನೋಡಿ ಪರಿಚಯವಿದ್ದ ಅವಿನಾಶ್ ಎಂಬಾತ ಮುಷ್ಠಿ ಗಾತ್ರದ ಕಲ್ಲೊಂದನ್ನು ಹೆಕ್ಕಿ, ಕೊಲೆ ಮಾಡುವ ಉದ್ದೇಶದಿಂದ ಬಲವಾಗಿ ಬಿಸಾಡಿದ್ದು, ಒಮ್ಮೆಲೆ ತಲೆಯನ್ನು ಹಿಂದಕ್ಕೆ ಸರಿಸಿದ ಪರಿಣಾಮ ಕಲ್ಲು ತಲೆಯ ಮದ್ಯಭಾಗಕ್ಕೆ ಬೀಳುವ ಬದಲು ಬಲಗಣ್ಣಿನ ಹಣೆಯ ಬಳಿ ಬಿದ್ದು ರಕ್ತಗಾಯ ವಾಗಿದೆ.


ಅಲ್ಲಿದ್ದ ಇನ್ನಿಬ್ಬರಾದ ಸುಮನ್ ಮತ್ತು ರೋಹನ್ ಎಂಬುವರು ಕೂಡಾ ಕಲ್ಲು ಹೊಡೆದಿದ್ದು, ವೆಂಕಟೇಶ್ ಅವರು ಒಮ್ಮೆಲೆ ಬಗ್ಗಿ ನೆಲದಲ್ಲಿ ಕುಳಿತ ಪರಿಣಾಮ ಕಲ್ಲು ಗಳು ಅವರ ತಲೆಯ ಮೇಲಿಂದ ಹಾದುಹೋಗಿದೆ. ಅಲ್ಲಿದ್ದ ಇತರರು ಕೂಡಾ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ವೇಳೆ ಸ್ಥಳಕ್ಕೆ ಬಂದ ಬಾಳೆಗೌಡ ಮೊಕಾಶಿ ಮತ್ತು ಎಚ್.ಜಿ.ರೋಹಿದಾಸ್ ಹಾಗೂ ಸ್ಥಳೀಯರಾದ ಚಂದ್ರು ಎಂಬುವರನ್ನು ಕಂಡು ಆರೋಪಿಗಳು ಓಡಿಹೋಗಿದ್ದಾರೆ.


ಘಟನೆಗೆ ಸಂಬಂಧಿಸಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.