ಮಂಗಳೂರು: ಉದ್ಯಮಿ, ಸಾಮಾಜಿಕ, ಧಾರ್ಮಿಕ ಮುಂದಾಳು ಬಿ.ಎಂ. ಮುಮ್ತಾಝ್ ಅಲಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ನಗರ ಅಪರಾಧ ಪತ್ತೆದಳ ಪೊಲೀಸರು ಬುಧವಾರ ಬಂಧಿಸಿ, ಕಾವೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
ಅಬ್ದುಲ್ ಸತ್ತಾರ್, ಮುಸ್ತಫಾ ಹಾಗೂ ಖಲಂದರ್ ಶಾಫಿ ನಂದಾವರ ಬಂಧಿತರು. ಪ್ರಕರಣದ ಮೊದಲ ಆರೋಪಿ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಆಯೆಷಾ ರೆಹಮತ್ (41) ಹಾಗೂ ಆಕೆಯ ಪತಿ ಶೋಯೆಬ್‌ರನ್ನು ಈಗಾಗಲೇ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಕಾವೂರು ಪೊಲೀಸರು ಅ.17ರ ತನಕ ಕಸ್ಟಡಿಗೆ ಪಡೆದಿದ್ದಾರೆ. ಕೊನೇಯ ಆರೋಪಿ ಕಾರು ಚಾಲಕ ಸಿರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬಿ.ಎಂ.ಮುಮ್ತಾಝ್ ಅಲಿ ಅವರು ಅ.6ರಂದು ಬೆಳಗ್ಗೆ ಕೂಳೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿರಂತರ ಹುಡುಕಾಟದ ಬಳಿಕ ಅವರ ಮೃತದೇಹ ಅ.7ರಂದು ಪತ್ತೆಯಾಗಿತ್ತು. ಮನೆಯವರು ನೀಡಿದ ಮಾಹಿತಿಯಂತೆ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿಯ ವಿಷಯ ಗೊತ್ತಾಗಿತ್ತು. ಇದರ ಹಿಂದಿರುವ ಆರೋಪಿಗಳ ಪತ್ತೆಗೆ ಆ ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿದ್ದರು. ಆದರೆ ಅಷ್ಟರಲ್ಲಿ ಮಾಹಿತಿ ತಿಳಿದ ಆರೋಪಿಗಳು ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಒಬ್ಬೊಬ್ಬರು ಒಂದೊಂದು ಕಡೆ ತಲೆಮರೆಸಿಕೊಳ್ಳಲಾರಂಭಿಸಿದ್ದರು.
ಆಯೆಷಾ ಪ್ರಕರಣದ ಸೂತ್ರಧಾರೆ
ಮುಮ್ತಾಝ್ ಅಲಿ ಅವರು ತನ್ನ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಆಯೆಷಾ ರೆಹಮತ್ ಜತೆ ಹೊಂದಿದ್ದ ಆತ್ಮೀಯ ನಂಟು ಅವರ ಪ್ರಾಣಕ್ಕೆ ಎರವಾಗಿದೆ. ಆಯೆಷಾ ಆತ್ಮೀಯತೆಯನ್ನು ದುರುಪಯೋಗಪಡಿಸಿಕೊಂಡು ಹಣ ಗಳಿಸಲು ಮುಂದಾಗಿದ್ದು, ಇದಕ್ಕೆ ಪತಿ ಹಾಗೂ ಇತರ ನಾಲ್ಕೈದು ಮಂದಿ ಸೇರಿಕೊಂಡು ಮತ್ತಷ್ಟು ಕಿರುಕುಳ ನೀಡಿದ ಕಾರಣದಿಂದ ಅಲಿ ಅವರು ಬದುಕುವ ನಿರ್ಧಾರಕ್ಕೆ ಕೊನೆ ಹಾಡಿದ್ದರು. ಆರೋಪಿಗಳು 50 ಲಕ್ಷ ರೂ. ಪಡೆದಿದ್ದು, ಅಲಿ ಅವರು 25 ಲಕ್ಷ ರೂ. ಚೆಕ್‌ನಲ್ಲಿ ನೀಡಿದ್ದರು. 2 ಕೋಟಿ ರೂ. ನೀಡಬೇಕು ಎನ್ನುವ ಬೇಡಿಕೆ ಇಟ್ಟಾಗ ಅಲಿ ಅವರು ಕುಸಿದು ಹೋಗಿದ್ದರು. ಈ ನಡುವೆ ಆಯೆಷಾ ತನ್ನ ಮಗುವಿನ ಜತೆ ಮುಮ್ತಾಝ್ ಅಲಿ ಅವರು ಆಟ ಆಡುತ್ತಿದ್ದ ವಿಡಿಯೋವನ್ನು ಅಲಿ ಅವರ ಕುಟುಂಬಸ್ಥರಿಗೆ ಕಳುಹಿಸಿದ್ದಳು. ಇದರಿಂದ ಅವರ ಕುಟುಂಬದಲ್ಲೂ ಒಂದಷ್ಟು ಕ್ಷೇಷ ಉಂಟಾಗಿತ್ತು.