ಮಂಗಳೂರು: ಬಾಳಿ ಬದುಕಬೇಕಿದ್ದ ತನ್ನ ಮೂವರು ಎಳೆಯ ಪ್ರಾಯದ ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆಗೈದು, ಪತ್ನಿಯನ್ನೂ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಮರಣದಂಡನೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೂಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಯಾನೇ ಹಿತೇಶ್ ಕುಮಾರ್(43) ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ:
2022ರ ಜೂ. 23ರಂದು ಸಂಜೆ ಸುಮಾರು 5.15ರ ವೇಳೆಗೆ ಹಿತೇಶ್ ತನ್ನ ಮಕ್ಕಳಾದ ರಶ್ಮಿತಾ ( 14 ), ಉದಯ ಕುಮಾರ್ (11), ಮತ್ತು ದಕ್ಷಿತ್ ಯಾನೇ ದಕ್ಷ್ ಕುಮಾರ್ (4) ಎಂಬವರನ್ನು ಮನೆಯ ಬಳಿ ಇರುವ ಅಶೋಕ್ ಶೆಟ್ಟಿಗಾರ್ ಎಂಬವರ ನೀರು ತುಂಬಿದ್ದ ಬಾವಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸಂಜೆ 5.35ರ ವೇಳೆ ಹೆಂಡತಿ ಲಕ್ಷ್ಮಿ ಅವರು ಮನೆಗೆ ಬಂದು ಮಕ್ಕಳ ಬಗ್ಗೆ ಕೇಳಿದಾಗ ಹೊರಗೆ ಹೋಗಿದ್ದಾರೆ, ಬಾವಿಯ ಹತ್ತಿರ ಆಟವಾಡುತ್ತಿದ್ದಾರೆ ಎಂದೆಲ್ಲ ಉತ್ತರ ನೀಡಿದ್ದು, ಆಕೆ ಬಾವಿಯ ಹತ್ತಿರ ಹೋದಾಗ ಆಕೆಯನ್ನೂ ಕೂಡಾ ಅದೇ ಬಾವಿಗೆ ದೂಡಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಉದಾಸೀನ ಪ್ರವೃತ್ತಿಯ ಹಿತೇಶ್ ಈ ಮೊದಲು ಎಂಆರ್‌ಪಿಎಲ್‌ನಲ್ಲಿ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ನಂತರ ಕೆಲಸವಿಲ್ಲದೆ ಮನೆಯಲ್ಲಿದ್ದ. ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೆಂಡತಿ ಬೀಡಿ ಕಟ್ಟುತ್ತಿದ್ದು, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಹತ್ತಿರದ ಹೊಟೇಲ್ ಒಂದಕ್ಕೆ ಕೆಲಸ ಹೋಗಲು ಆರಂಭಿಸಿ 15 ದಿನ ಆಗಿತ್ತು. ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಾಳೆ ತಾನು ಮನೆಯಲ್ಲಿದ್ದೇನೆ ಎನ್ನುವ ಅವಮಾನವೂ ಆತನಿಗಿತ್ತು. ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಅವರನ್ನು ಸಾಯಿಸಿದರೆ ತನಗೆ ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ತನ್ನ ಮೂವರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿ ತನ್ನ ಹೆಂಡತಿಯನ್ನೂ ಕೂಡಾ ಬಾವಿಗೆ ದೂಡಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದಾನೆ.
ಮುಲ್ಕಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಕುಸುಮಾಧರ್ ಕೆ.ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಪ್ರಕರಣದ ಸಾಕ್ಷೃ ದಾಖಲೆಗಳು ಹಾಗೂ ಪೂರಕ ಸಾಕ್ಷೃ ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಡಿ.30ರಂದು ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ಐಪಿಸಿ ಕಲಂ: 302ರಡಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಮತ್ತು ಕಲಂ: 307ರಡಿ ಹೆಂಡತಿಯನ್ನು ಕೊಲೆಗೆ ಯತ್ನಿಸಿದ್ದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.
ಮಕ್ಕಳ ತಾಯಿ ಲಕ್ಷ್ಮೀ ರವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯದಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಅವರು ನಡೆಸಿ ವಾದ ಮಂಡಿಸಿದ್ದಾರೆ.
ಮರಣ ದಂಡನೆ ಆದೇಶ ಜಾರಿಯಾಗಲು ಹೈಕೋರ್ಟ್ ದೃಢೀಕರಣ ಬೇಕು. ದೃಢೀಕರಣಕ್ಕಾಗಿ ಸಲ್ಲಿಸಿದಾಗ ಅದನ್ನು ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡುತ್ತಾರೆ. ಜತೆಗೆ ಆತನಿಗೆ ಹೈಕೋರ್ಟ್‌ಗೆ ಅಪೀಲು ಮಾಡುವ ಅವಕಾಶವೂ ಇದೆ.
ಆರೋಪ ಸಾಬೀತು ಆಗಿದೆ ಎಂದು ನ್ಯಾಯಧೀಶರು ತಿಳಿಸಿದಾಗ ಆತ ವಿಚಲಿತಗೊಂಡಿರಲಿಲ್ಲ. ಶಿಕ್ಷೆ ಪ್ರಕಟವಾಗುವುದಕ್ಕೆ ಮೊದಲು ಬೇರೆ ಕೈದಿಗಳ ಜತೆ ನಗುತ್ತಾ ಮಾತನಾಡುತ್ತಿದ್ದ. ಗಲ್ಲು ಶಿಕ್ಷೆ ಎಂದು ತೀರ್ಪು ಪ್ರಕಟಿಸಿದಾಗ ಮುಖದಲ್ಲಿ ಬೇಸರದ ಭಾವ ಕಂಡು ಬಂದಿದೆ.