ಜಿಲ್ಲೆ

ರಾಜಕಾರಣ ಭವಿಷ್ಯದ ಜನಾಂಗಕ್ಕೆ ಪೂರಕವಾಗಿರಬೇಕು ಮದರ್ ತೆರೆಸಾ 27ನೇ ಸಂಸ್ಮರಣಾ ದಿನಾಚರಣೆಯಲ್ಲಿ ಸಸಿಕಾಂತ್ ಸೆಂಥಿಲ್ ಅಭಿಮತ

ಮಂಗಳೂರು: ಭವಿಷ್ಯದ ಜನಾಂಗಕ್ಕೆ ಪೂರಕವಾಗಿ ಸಮಾನತೆಯ, ಪ್ರತೀಯ ರಾಜಕಾರಣ ನಮ್ಮದಾಗಬೇಕು. ಯಾವುದೇ ಸಿದ್ಧಾಂತದಿಂದ ಶಾಂತಿ, ಸಮಾಧಾನ, ಪ್ರೀತಿ ಸಾಧ್ಯವಿಲ್ಲ ಎಂದು ದ.ಕ. ನಿವೃತ್ತ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಅಭಿಪ್ರಾಯ ಪಟ್ಟರು.


ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ಸಂತ ಮದರ್ ತೆರೇಸಾರ 27ನೇ ಸಂಸ್ಮರಣಾ ದಿನಾಚರಣೆ ಸಲುವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು, ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಗೆ ಸೀಮಿತವಾಗಿ ಸ್ಪರ್ಧಾತ್ಮಕವಾಗಿ ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ನಾವು ಮಕ್ಕಳಲ್ಲಿ ಸಹಕಾರ ಹವ್ಯಾಸವನ್ನು ಬೆಳೆಸಬೇಕು. ಈ ರೀತಿಯ ಪ್ರೀತಿ, ಸಹಕಾರ ಮನಸ್ಥಿತಿಯ ಸಮಾಜವನ್ನು ಕಟ್ಟುವುದೇ ನಾವು ಮದರ್ ತೆರೆಸಾ ಅವರಿಗೆ ಸಲ್ಲಿಸುವ ಗೌರವ ಎಂದವರು ಹೇಳಿದರು.


ದೇಶದಲ್ಲಿ ಒಂದು ಮನಸ್ಥಿತಿ ಎಲ್ಲರನ್ನು ಸಮಾನವಾಗಿ ನೋಡುವಂತದ್ದು, ಎಲ್ಲರನ್ನು ಪ್ರೀತಿಸುವುದು, ಎಲ್ಲರನ್ನು ಸಹೋದರತ್ವದಿಂದ ನೋಡುವುದು. ಇನ್ನೊಂದು ಮನಸ್ಥಿತಿ ಮೇಲು ಕೀಳಿನ ಭಾವನೆಯನ್ನು ಮೂಡಿಸುವಂತದ್ದು. ಇಂದಿಗೂ ಈ ವರ್ಚಸ್ಸು ಮತ್ತು ಸಮಾನತೆಯ ನಡುವೆ ಸಂಘರ್ಷ ಮುಂದುವರಿಯುತ್ತಲೇ ಇದೆ ಎಂದವರು ಹೇಳಿದರು.


ಶೇ.70ರಷ್ಟು ಹೋರಾಟ ಸಮಾನತೆಗೆ
ಸ್ವಾತಂತ್ರೃ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ನಮ್ಮ ಹೋರಾಟ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬ್ರಿಟಿಷರ ವಿರುದ್ಧದ ಹೋರಾಟ ಶೇ. 30ರಷ್ಟಾಗಿದ್ದು, ಶೇ. 70ರಷ್ಟು ಹೋರಾಟ ನಡೆದಿದ್ದು ಸಮಾನತೆಗಾಗಿ. ಕೇವಲ ಧೋತಿಯೊಂದಿಗೆ ಬರೀ ಮೈಯ್ಯಲ್ಲಿ ಇರುತ್ತಿದ್ದ ಗಾಂಧೀಜಿ ಸಮಾನತೆಯ ಸಂಕೇತವಾಗಿದ್ದರು. ಸ್ವಾತಂತ್ರೃದ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಮಾನತೆಗೆ ಲಿಖಿತ ರೂಪ ನೀಡಲಾಯಿತು. ದೇಶವನ್ನು ಯಾವ ರೀತಿಯಲ್ಲಿ ಸಮಾನವಾಗಿ ಮಾಡಬೇಕೆಂಬ ಚಿಂತನೆಯೊಂದಿಗೆ ಸಂವಿಧಾನ ರಚಿಸಲಾಯಿತು. ಈ ಸಮಾನತೆಯನ್ನು ಅಂದೂ ಬಹಳ ಮಂದಿ ಒಪ್ಪಿರಲಿಲ್ಲ. ಇಂದೂ ಒಪ್ಪುತ್ತಿಲ್ಲ. ವಿಭಿನ್ನತೆಯನ್ನು ಸಂಭ್ರಮಿಸುವ ಮನಸ್ಥಿತಿಯೇ ಭಾರತದ ಕಲ್ಪನೆ. ಈ ಸುಂದರ ಪರಿಕಲ್ಪನೆಯಡಿ ವಿಭಿನ್ನತೆಯನ್ನು ಆಚರಣೆ ಮಾಡುವ ದೇಶ ಪ್ರಪಂಚದಲ್ಲಿ ಭಾರತ ಹೊರತುಪಡಿಸಿ ಇನ್ನೊಂದಿಲ್ಲ. ಹಾಗಾಗಿ ನಮ್ಮ ಸಂವಿಧಾನದಲ್ಲಿಯೇ ಆಚರಣೆ, ಸಮಾನತೆಯನ್ನು ಒಳಪಡಿಸಿದ್ದೇವೆ. ಸಂವಿಧಾನ ಇಲ್ಲದಿದ್ದರೆ ಇಷ್ಟೊಂದು ಪ್ರೀತಿ, ಸಮಾನತೆಯಿಂದ ಇರಲು ಸಾಧ್ಯವಿರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪರಸ್ಪರ ವಿಭಿನ್ನತೆಯನ್ನು ಸಂಭ್ರಮಿಸಿ ಎಂಬುದು ಮದರ್ ತೆರೆಸಾ ಅವರ ಸಂದೇಶವೂ ಆಗಿತ್ತು ಎಂದು ಸಸಿಕಾಂತ್ ಸೆಂಥಿಲ್ ವ್ಯಾಖ್ಯಾನಿಸಿದರು.


‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ವಿಷಯದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿದರು. ಸಂವಿಧಾನದ ಆಶಯಗಳನ್ನು ನುಚ್ಚುನೂರು ಮಾಡುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧರ್ಮ ಪ್ರಭುತ್ವಕ್ಕೆ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಂವಿಧಾನವೇ ದೇಶದ ಪವಿತ್ರ ಗ್ರಂಥವಾಗಿದೆ ಎಂದರು.
ಸಾಮಾಜಿಕ ಚಿಂತಕಿ, ಸಾಹಿತಿ ಆಯಿಶಾ ಫರ್ಝಾನಾ ಪ್ರತಿಕ್ರಿಯೆ ವ್ಯಕ್ತಪಡಿಸಿ, ಮದರ್ ತೆರೆಸಾ ಅವರ ತ್ಯಾಗ ಇಡೀ ಪ್ರಪಂಚಕ್ಕೆ ದೊಡ್ಡ ಸಂದೇಶ ನೀಡಿದೆ ಎಂದರು.


ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅಧ್ಯಕ್ಷತೆ ವಹಿಸಿದ್ದರು.
ಸಾಮರಸ್ಯದ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ವಂ.ಜೆ.ಬಿ.ಸಲ್ದಾನಾ, ವಂ. ರೂಪೇಶ್ ಮಾಡ್ತಾ, ವಂ. ಸುದೀಪ್ ಪೌಲ್, ಡಾ.ಕೃಷ್ಣಪ್ಪ ಕೊಂಚಾಡಿ, ಎರಿಕ್ ಲೋಬೋ, ಆಲ್ವಿನ್ ಡಿಸೋಜ, ಬಿ.ಎನ್.ದೇವಾಡಿಗ, ಕರಿಯ ಮಂಗಳಜ್ಯೋತಿ, ಸುಮತಿ ಎಸ್.ಹೆಗ್ಡೆ, ಎಂ. ದೇವದಾಸ್, ದಿಯಾ ಎಚ್. ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.


ಸಾಮರಸ್ಯ ಅಧ್ಯಕ್ಷೆ ಮಂಜುಳಾ ನಾಯಕ್ ಸ್ವಾಗತಿಸಿದರು. ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾಲ್ಫಿ ಡಿಸೋಜಾ ವಂದಿಸಿದರು.