ಜಿಲ್ಲೆ

ಭ್ರಷ್ಟ ವ್ಯವಸ್ಥೆ ನಿಗ್ರಹಕ್ಕೆ ಸಾಧು ಸಂತರ ಮಾರ್ಗದರ್ಶನ ಅವಶ್ಯಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆಯಲ್ಲಿ ಡಾ.ಎಂ.ಮೋಹನ ಆಳ್ವ

ಮಂಗಳೂರು: ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವ ವ್ಯಾಪಿಯಾಗಿದೆ. ಇದರ ನಿಗ್ರಹಕ್ಕೆ ಸಾಧು ಸಂತರ ಮಾರ್ಗದರ್ಶನ ಅವಶ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.


ನಗರದ ಸಂಘನಿಕೇತನದಲ್ಲಿ ಭಾನುವಾರ ಮಾತಾ ಅಮೃತಾನಂದಮಯಿ ಮಠದ ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಮ್ಮನವರ 71ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಮ್ಮನವರ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಮನುಷ್ಯರ ಮದ್ಯೆ ಇರುವ ಕಂದಕಗಳನ್ನು ದೂರಮಾಡುವ ಕಾರ್ಯ ಶ್ಲಾಘನೀಯ ಎಂದರು.


ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಶ್ರೀಗುರು ಪಾದುಕಾಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಅಮ್ಮನ ಗರ್ಭದಲ್ಲಿ ಮಗು ಇರುವಾಗ ಅದಕ್ಕೆ ಬೇಕಾದ ಪೋಷಕಾಂಶಗಳು ಆ ತಾಯಿಯಿದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿ ಇದ್ದೇವೆ. ಮಗು ತಾಯಿಯ ಪ್ರೇಮವನ್ನು ಅನುಭವಿಸುತ್ತದೆ. ಗರ್ಭದಿಂದ ಹೊರಬಂದ ಮೇಲೆ ತಾಯಿ ಮಗುವಿನ ಮುಖಾಮುಖಿ ಆಗುತ್ತದೆ. ಅಮ್ಮನ ಕರುಣೆ, ಭಕ್ತಿಭಾವ ನಮ್ಮಲ್ಲಿ ಸದಾ ಇರಲಿ ಎಂದರು.


ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ್ ಆಳ್ವ ಮಾತನಾಡಿ, ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಂದು ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥ ಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆಯಾಗಿದ್ದು ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿಯನ್ನು ಬೆಳಗಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಅಮ್ಮನವರ ಜೀವನವನ್ನು ಆಧರಿಸಿದ ಕಥಾಮೃತ ಕಾರ್ಯಕ್ರಮವನ್ನು ಗಣೇಶ್ ಎರ್ಮಾಳ್ ಪ್ರಸ್ತುತ ಪಡಿಸಿದರು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನವರಾದ ದಿಶಾ ಅಮೃತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನ ಮಾಡಲಾಯಿತು. ಡಾ.ಜೀವರಾಜ್ ಸೊರಕೆಯವರು ಅಮ್ಮನೊಂದಿಗಿನ ಅನುಭವಾಮೃತಗಳನ್ನು ತಿಳಿಸಿದರು.


ಮಂಗಳೂರಿನ ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಸ್ವಾಗತಿಸಿದರು. ಉಡುಪಿ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ಕೊಡವೂರು ವಂದಿಸಿದರು. ಡಾ.ದೇವದಾಸ್ ಪುತ್ರನ್ ನಿರೂಪಿಸಿದರು.