ಜಿಲ್ಲೆ

ಶ್ರೀ ಮಂಗಳಾದೇವಿಗೆ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ರಜತ ಹಸ್ತ ಸಮರ್ಪಣೆ

ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ಸೇವೆಯನ್ನೇ ಮೂಲ ಧ್ಯೆಯವನ್ನಾಗಿಸಿಕೊಂಡು ಸ್ಥಾಪನೆಯಾಗಿರುವ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ನವರಾತ್ರಿಯ ಆರಂಭದ ದಿನವಾದ ಗುರುವಾರ ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿಯವರ ಸಮ್ಮುಖದಲ್ಲಿ ರಜತ ಹಸ್ತಗಳನ್ನು ಸಮರ್ಪಿಸಲಾಯಿತು.


ಶ್ರೀ ಮಂಗಳಾದೇವಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಳ್ಳುವ ಶ್ರೀ ಮಂಗಳಾದೇವಿ ಸೇವಾ ಸಮಿತಿಯು ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಮಹೋತ್ಸವ, ಜಾತ್ರಾ ಮಹೋತ್ಸವ ಸೇರಿದಂತೆ ಎಲ್ಲಾ ಅನ್ನ-ಸಂತರ್ಪಣೆಯ ದಿವಸಗಳಂದು ತೊಡಗಿಸಿಕೊಂಡಿರುತ್ತದೆ.


ಸಮಿತಿಯ ಅಧ್ಯಕ್ಷರಾದ ದಿಲ್ ರಾಜ್ ಆಳ್ವ ಮಾತನಾಡಿ, ನಮ್ಮ ಸಮಿತಿಯು ಅನೇಕ ವರ್ಷಗಳಿಂದ ತಾಯಿಯ ಸೇವೆಯಲ್ಲಿ ಪಾಲ್ಗೊಂಡಿದೆ. ಈ ವರ್ಷ ವಿಶೇಷವಾಗಿ ರಜತ ಹಸ್ತ ಸಮರ್ಪಣೆ, ವಿಜಯ ದಶಮಿಯಂದು ಸಮಿತಿಯ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.


ಹಿರಿಯ ಸದಸ್ಯರಾದ ಎ. ಸೀತಾರಾಮ, ಬಿ. ಅಶೋಕ್ ಕುಮಾರ್, ಕೇಶವ , ತುಕಾರಾಮ್, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್, ಕೋಶಾಧಿಕಾರಿ ವಿಶ್ವನಾಥ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ ಉಪಸ್ಥಿತರಿದ್ದರು.